ಬಾಗಲಕೋಟೆ
ನೂರಾರು ವರ್ಷಗಳ ಹಿಂದೆ ದೇಶದಲ್ಲಿ ಬಾಲ್ಯವಿವಾಹ, ಸತಿ ಸಹಗಮನ, ಜೀತ ಪದ್ದತಿ, ಮೇಲು-ಕೀಳು ಹಾಗೂ ಪ್ರಾಣಿ ಬಲಿ ಹೀಗೆ ಮುಂತಾದ ಅನಿಷ್ಟ ಪದ್ದತಿಗಳನ್ನು ನಿರ್ಮೂಲನೆಗೊಳಿಸಿ ಒಂದೇ ಎಂದು ಸಾರಿದವರು ಬ್ರಹ್ಮಶ್ರೀ ನಾರಾಯಣಗುರು ಎಂದು ಶಾಸಕ ಎಚ್.ವಾಯ್.ಮೇಟಿ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ಅರ್ಪಿಸಿ ಮಾತನಾಡಿದ ಅವರು ಲೋಕ ಕಲ್ಯಾಣಕ್ಕಾಗಿ ತುಳಿತಕ್ಕೆ ಒಳಗಾದ ಜನಾಂಗದ ಸುಧಾರಣೆಗಾಗಿ ದೇಶದ ನಾನಾ ಭಾಗಗಳಲ್ಲಿ ಸಂಚರಿಸಿ ಅನೇಕ ಮಠ ಮಂದಿರಗಳನ್ನು ನಿರ್ಮಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಆದ್ಯಾತ್ಮಿಕ ಚಿಂತಕರಾಗಿದ್ದರು ಎಂದರು.
ಇಂತಹ ಮಹಾನ್ ಗುರುಗಳಿಂದ ನಾಡು ಪಾವನಗೊಂಡಿದ್ದು, ಅವರನ್ನು ಗೌರವಿಸುವ ಹಾಗೂ ತತ್ವಾದರ್ಶ ಅನುಕರಣೆ ಮಾಡುವ ಉದ್ದೇಶದಿಂದ ಸರಕಾರ ಪ್ರತಿವರ್ಷ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.
ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿ ಜಾತಿ ಬೇಧವನ್ನು ಹೋಗಲಾಡಿಸಿ ಸಮಾನತೆಯನ್ನು ಕಾಣಲು ೧೨ನೇ ಶತಮಾನದಲ್ಲಿ ಕ್ರಾಂತಿಗಳಾದವು. ಅನೇಕ ಶರಣರು ಸಮಾಜ ಸುಧಾರಣೆಗೆ ಮುಂದಾಗಿದ್ದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಸಹ ಮಾನವ ಕುಲ ಒಂದೇ ಆಗಿದ್ದು, ನಾವು ಮಾಡುವ ಕಾಯಕದಿಂದ ಜಾತಿಗಳು ಹುಟ್ಟಿಕೊಂಡಿವೆ. ಎಲ್ಲರಲ್ಲು ಸಮಾನತೆ ಕಾಣಲು ಅನೇಕ ಮಹಾ ಪುರುಷರ ಜಯಂತಿಗಳನ್ನು ಸರಕಾರ ಮಟ್ಟದಲ್ಲಿ ಆಚರಿಸಲಾಗುತ್ತಿದೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಬಾದಾಮಿ ಆದರ್ಶ ವಿದ್ಯಾಲಯದ ಶಿಕ್ಷಕ ಶ್ರೀನಿವಾಸ ಈಳಗೇರ ಮಾತನಾಡಿ ವಿರಾಜ ಮಾನರಾಗಿರುವ ಬ್ರಹ್ಮಶ್ರೀ ನಾರಾಯಣಗುರು, ಬಸವಣ್ಣನವರು ಸೇರಿದಂತೆ ಅನೇಕರು ಮಹಾ ವಿಶ್ವಗುರುಗಳಾಗಿ ಹೊರಹೊಮ್ಮಿದ್ದಾರೆ. ಕೇರಳದ ತಿರವಂತಪೂರದಲ್ಲಿ ಹುಟ್ಟಿದ ನಾರಾಯಣಗುರುಗಳು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸಿಸುವ ಸಲುವಾಗಿ ಕೇರಳದ ಜಾತಿ ಪೀಡಿತ ಸಮಾಜದಲ್ಲಿನ ಅನ್ಯಾಯದ ವಿರುದ್ದ ಸುಧಾರಣಾ ಚಳುವಳಿಯನ್ನು ನಡೆಸಿದವರು. ಇದರ ಪರಿಣಾಮವಾಗಿ ದೇವಾಲಯವನ್ನು ತೆರೆಯಲು ಮತ್ತು ಮೂರು ರಸ್ತೆಗಳನ್ನು ಜನರಿಗೆ ತಲುಪಿಸಲು ಕಾರಣವಾಯಿತು ಎಂದರು.
ಗುರುಗಳ ದೃಷ್ಟಿಯಲ್ಲಿ ಬಡವರ, ದುರ್ಬಲರ ಸೇವೆಯೇ ದೇವರ ಸೇವೆಯಾಗಿತ್ತು. ಸಮಾನತೆಗಾಗಿ ಹಮ್ಮಿಕೊಂಡ ಶಿವಗಿರಿಯನ್ನು ಬಸವಣ್ಣನವರ ಅನುಭವ ಮಂಟಪಕ್ಕೆ ಹೋಲಿಸಲಾಗಿದೆ. ಶಿವಗಿರಿಯ ಮೂಲಕ ಒಂದೇ ಜಾತಿ, ಒಂದೇ ದೇವರು, ಒಂದೇ ಧರ್ಮ ಇವುಗಳ ಮೂಲಕ ಮಾನವ ಸಮಾಜವನ್ನು ಎತ್ತರಕ್ಕೆ ಕೊಂಡೊಯ್ಯುವುದು ಹಾಗೂ ಮೂಲಭೂತ ಹಕ್ಕುಗಳ ಸಂರಕ್ಷಣೆಗಾಗಿ ಅಸ್ಪ್ರಶ್ಯತಾ ನಿರ್ಮೂಲನೆ ಮಾಡುವ ಗುರಿಗಳನ್ನು ಇಟ್ಟುಕೊಳ್ಳಲಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ, ಸಮುದಾಯದ ಮುಖಂಡರಾದ ಮಹಾಂತೇಶ ಇಳಗೇರ, ಮುತ್ತು ಕರಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು