ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣ ಮುನಿಸಿಕೊಂಡು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವ ಭರವಸೆ ಸಿಕ್ಕ ಬಳಿಕ ವಾಪಸ್ಸು ಬಿಜೆಪಿ ಹೋಗಿದ್ದರು.ಧಾರವಾಡ ಕ್ಷೇತ್ರದ ಟಿಕೆಟ್ ಸಿಗದೆ ಹೊದಾಗ ಅವರು ಪುನಃ ಬಂಡೇಳುವ ವದಂತಿ ಹಬ್ಬಿದ್ದು ಸುಳ್ಳಲ್ಲ. ಆದರೆ ವರಿಷ್ಠರು ಅವರಿಗೆ ಬೆಳಗಾವಿ ಕ್ಷೇತ್ರದ ಟಿಕೆಟ್ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಹಾಲಿ ಸಂಸದೆ ಮಂಗಳಾ ಅಂಗಡಿಯವರು ಸಹ ತನ್ನ ಪರವಾಗಿ ಪ್ರಚಾರ ಮಾಡುವ ಭರವಸೆ ನೀಡಿರುವರೆಂದು ಹೇಳಿದ ಶೆಟ್ಟರ್ ಚುನಾವಣೆಗಳಲ್ಲಿ ಜಾತಿ ಲೆಕ್ಕಾಚಾರ ಕೆಲಸ ಮಾಡಲ್ಲ, ತಾನು ಹುಬ್ಬಳ್ಳಿಯವನಾದರೂ ಇಡೀ ರಾಜ್ಯದ ನಾಯಕನಾಗಿ ಬೆಳೆದಿರುವೆ, ಮತ್ತು ಪ್ರತಿ ಚುನಾವಣೆಯನ್ನು ಗಂಬೀರವಾಗಿ ಎದುರಿಸುವ ಜಾಯಮಾನ ತನ್ನದು ಎಂದರು. ಹುಬ್ಬಳ್ಳಿ ತನ್ನ ಜನ್ಮಭೂಮಿಯಾದರೆ ಬೆಳಗಾವಿ ಕರ್ಮಭೂಮಿಯಾಗಲಿದೆ ಎಂದು ಅವರು ಹೇಳಿದರು.
ತಮ್ಮ ಹುಬ್ಬಳ್ಳಿ ಕಚೇರಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶೆಟ್ಟರ್, ಬೆಳಗಾವಿಯಲ್ಲಿ ಗೆಲುವು ಸಾಧಿಸುವುದು ಕಷ್ಟವಾಗಲಾರದು ಯಾಕೆಂದರೆ ಸುರೇಶ್ ಅಂಗಡಿಯವರು ಜಿಲ್ಲಾಧ್ಯಕ್ಷ ಮತ್ತು ತಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಬೆಳಗಾವಿಯಲ್ಲಿ ಸಾಕಷ್ಟು ಸಂಘಟನಾ ಕೆಲಸ ಮಾಡಿದ್ದಲ್ಲದೆ ಎರಡು ಬಾರಿ ಜಿಲ್ಲಾ ಉಸ್ತುವಾರಿ ಕೆಲಸ ಮಾಡಿದ ಅಂಶವೂ ನೆರವಾಗಲಿದೆ ಎಂದು ಸೂಚಿಸಿದರು.