ನಿಮ್ಮ ಸುದ್ದಿ ಬಾಗಲಕೋಟೆ
ಡಿಸೆಂಬರ ೨೩ ರಂದು ಆಚರಿಸಲ್ಪಡುವ ರೈತ ದಿನಾಚರಣೆ ಅಂಗವಾಗಿ ಬಾಗಲಕೋಟೆಯಲ್ಲಿ ಬೆಲ್ಲದ ಹಬ್ಬ, ಬೆಲ್ಲದ ಮೌಲ್ಯವರ್ಧಿತ ಆಹಾರ ಪದಾರ್ಥಗಳ ಪ್ರದರ್ಶನ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ರೈತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿದೇಶಕಿ ಡಾ.ಚೇತನಾ ಪಾಟೀಲ ತಿಳಿಸಿದರು.
ನಗರದ ಬವಿವ ಸಂಘದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ಸ್ಟಡೀಜ್ (ಎಂ.ಬಿ.ಎ) ಕಾಲೇಜಿನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ವ್ಯಾಪ್ತಿಯಲ್ಲಿ ೧ ಲಕ್ಷ ಎಕರೆದಷ್ಟು ಕಬ್ಬು ಬೆಳೆಯಲಾಗುತ್ತಿದೆ. ಬೆಲ್ಲ ಉತ್ಪಾದನೆಯಲ್ಲಿ ಮಹಾಲಿಂಗಪೂರ ದೇಶಕ್ಕೆ ಮಾದರಿಯಾಗಿದ್ದು, ಬೆಲ್ಲದಿಂದ ವಿವಿಧ ಆಹಾರ ಪದಾರ್ಥಗಳ ತಯಾರಿಕೆ, ಉತ್ಪನ್ನಗಳನ್ನು ಪ್ಯಾಕ್ ಮಾಡಿ ಬ್ರ್ಯಾಂಡ್ ರೂಪದಲ್ಲಿ ಮಾರುಕಟ್ಟೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಬೆಲ್ಲದ ಹಬ್ಬವನ್ನು ಆಯೋಜಿಸಿರುವುದಾಗಿ ತಿಳಿಸಿದರು.
ಜಿಲ್ಲಾಡಳಿತ, ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಬಿವಿವ ಸಂಘದ ಎಂ.ಬಿ.ಎ ಕಾಲೇಜ, ಮುಧೋಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ಕೃಷಿಕ ಸಮಾಜದ ಸಹಯೋಗದಲ್ಲಿ ಡಿಸೆಂಬರ ೨೩ ರಂದು ವಿದ್ಯಾಗಿರಿಯಲ್ಲಿರುವ ಬ.ವಿ.ವ ಸಂಘದ ಎಂ.ಬಿ.ಎ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಹಬ್ಬದಲ್ಲಿ ಬೆಲ್ಲವನ್ನು ಉಪಯೋಗಿಸಿ ಸಿರಿಧಾನ್ಯಗಳು ಹಾಗೂ ಇತರೆ ಆಹಾರ ಪದಾರ್ಥಗಳನ್ನು ಬಳಸಿ ತಯಾರಿಸಿದ ಪದಾರ್ಥಗಳ ಪ್ರದರ್ಶನ ಕೂಡ ನಡೆಸಲಾಗುತ್ತಿದೆ ಎಂದರು.
ಕೇಂದ್ರ ಸರಕಾರದ ಆತ್ಮ ನಿರ್ಭರ ಭಾರತ ಅಭಿಯಾನ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವ ಯೋಜನೆಯಡಿ ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಇದು ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ಅಭಿವೃದ್ದಿಗೆ ಅನುಕೂಲವಾಗಲಿದೆ. ಈ ಯೋಜನೆಯಡಿ ಈಗಾಗಲೇ ಆನ್‌ಲೈನ್ ಮೂಲಕ ೨೨ ಜನ ನೊಂದಣಿ ಮಾಡಿಕೊಂಡಿದ್ದಾರೆ. ಬೆಳೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ನೇರ ಮಾರಾಟ ವ್ಯವಸ್ಥೆಯ ಬಗ್ಗೆ ರೈತರಲ್ಲಿ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅತಿಥಿಗಳಾಗಿ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ಹಿರಿಯ ವಿಜ್ಞಾನ ಡಾ.ಬಾಬಾಸಾಹೇಬ ಬೋರಸೆ ಬೆಲ್ಲ ಮತ್ತು ಬೆಲ್ಲದ ಉತ್ಪನ್ನ ಕುರಿತು, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ.ಹೇಮಲತಾ ಪೋದ್ದಾರ ಬೆಳೆಗಳ ಮೌಲ್ಯವರ್ಧಿತ ಸಂಸ್ಕರಣೆ ಕುರಿತು, ಬಾಗಲಕೋಟೆ ಬಿವಿವ ಸಂಸ್ಥೆಯ ಇಂಜಿನೀಯರಿಂಗ್ ಕಾಲೇಜಿನ ಪ್ರಾದ್ಯಾಪಕ ಹಾಗೂ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಭಾರತಿ ಮೇಟಿ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸುವಲ್ಲಿ ರೈತರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದರು.
ಬವಿವ ಸಂಘದ ಎಂ.ಬಿ.ಎ ಕಾಲೇಜಿನ ನಿರ್ದೇಶಕ ಡಾ.ಆರ್.ಜಿ.ಅಳ್ಳಗಿ ಮಾತನಾಡಿ, ಎಂಬಿ.ಎ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಬೆಲ್ಲದಿಂದ ವಿವಿಧ ಆಹಾರ ಉತ್ಪಾದನೆಗಳನ್ನು ತಯಾರಿಸಿ ಪ್ರದರ್ಶನ ಮಾಡಲಿದ್ದಾರೆ. ಇದಕ್ಕಾಗಿ ೪೦ ತಂಡಗಳನ್ನು ರಚಿಸಲಾಗಿದ್ದು, ಆಹಾರ ಉತ್ಪಾದನೆ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆಯಲಿದ್ದಾರೆ. ಕೋವಿಡ್-೧೯ ಜಾಗೃತಿಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ರೈತರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ರೈತರಲ್ಲಿ ಆತ್ಮವಿಶ್ವಾಸ ಬೆಳೆಸಲು ಸಾಧ್ಯವಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಮೌನೇಶ್ವರಿ ಕಮ್ಮಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್.ಬಿ.ಹಳ್ಳೊಳ್ಳಿ, ಗೀತಾ ಹಿರೇಮಠ, ಎಂ.ಬಿ.ಎ ಕಾಲೇಜಿನ ಅಶೋಕ ಉಟಗಿ, ವಿಜಯಲಕ್ಷ್ಮೀ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.