ಹಾಸನ: ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಶಾಶ್ವತವಾದದ್ದು. ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಾಗಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಸೂಚಿಸಿದರು.
ಹಾಸನದಲ್ಲಿ ಮೈತ್ರಿ ಅಭ್ಯರ್ಥಿ, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದು ಅವರು ಮಾತನಾಡಿದರು. ರೈತ, ದಲಿತ ವಿರೋಧಿ ಕಾಂಗ್ರೆಸ್ ಪಕ್ಷವನ್ನು ದೇಶದಿಂದ ಕಿತ್ತೊಗೆಯಬೇಕು. ಆ ನಿಟ್ಟಿನಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಎಂದರು.
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ನಮ್ಮೆಲ್ಲರ ಹಿರಿಯರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಆಶೀರ್ವಾದ ಮಾಡಿರಲಿಲ್ಲ. ಈ ಚುನಾವಣೆಯಲ್ಲಿ ದೇವೇಗೌಡರ ಆಶೀರ್ವಾದ ನಮ್ಮ ಮೇಲಿದೆ ಎಂದು ವಿಜಯೇಂದ್ರ ಹೇಳಿದರು.
ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಮೊಮ್ಮಗ ಪ್ರಜ್ವಲ್ ನಾಮಪತ್ರ ಸಲ್ಲಿಕೆ ವೇಳೆ ದೇವೇಗೌಡರು ಹಾಜರಿದ್ದರು. ಉಳಿದಂತೆ ಬಿವೈ ವಿಜಯೇಂದ್ರ, ಹೆಚ್.ಡಿ.ರೇವಣ್ಣ, ಡಿ.ವಿ.ಸದಾನಂದ ಗೌಡ ಹಾಜರಿದ್ದರು.
ನಾಮಪತ್ರ ಸಲ್ಲಿಕೆ ಬಳಿಕ ದೇವೇಗೌಡರ ನೇತೃತ್ವದಲ್ಲಿ ರೋಡ್ಶೋ ನಡೆಯಿತು. ಹಾಸನದಲ್ಲಿ ಮೊಮ್ಮಗ ಪ್ರಜ್ವಲ್ ಪರ ದೇವೇಗೌಡ ರೋಡ್ಶೋ ನಡೆಸಿ ಮತಯಾಚನೆ ಮಾಡಿದರು.
ಪ್ರಧಾನಿ ಮೋದಿ ಅವರಿಗಾಗಿ ಹೆಚ್ಡಿ ದೇವೇಗೌಡರು ಮೈತ್ರಿ ಮಾಡಿಕೊಂಡಿದ್ದಾರೆ. ದೇವೇಗೌಡರು ಖುದ್ದು ಮೋದಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಹಾಸನ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಗೆಲ್ಲಿಸಲು ನಾವು ಕೆಲಸ ಮಾಡಬೇಕು ಎಂದು ವಿಜಯೇಂದ್ರ ಹೇಳಿದರು.