ಬೆಂಗಳೂರು: ರಾಜ್ಯದಲ್ಲಿ ಹಾದಿ ಬೀದಿಗಳಲ್ಲಿ ಕೊಲೆಗಳು ನಡೆಯುತ್ತಿವೆ, ರಾಜ್ಯದ ಜನರಿಗೆ ನೆಮ್ಮದಿಯ ಗ್ಯಾರಂಟಿಯನ್ನು ಸರ್ಕಾರ ನೀಡುತ್ತಿಲ್ಲ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದರು.
ಎನ್‌ಸಿಆರ್‌ಬಿ ವರದಿಯನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಜೆಡಿಎಸ್ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಹಾದಿಬೀದಿಯಲ್ಲಿ ಕೊಲೆಗಳಾಗುತ್ತಿವೆ ಎಂದು ಕಿಡಿಕಾರಿದರು.
ಕಳೆದ 4 ತಿಂಗಳಲ್ಲಿ ರಾಜ್ಯದಲ್ಲಿ 430 ಕೊಲೆ, 198 ಅತ್ಯಾಚಾರಗಳು ನಡೆದಿವೆ ಎಂದು ಎನ್ ಸಿ ಆರ್ ಬಿ ವರದಿ ಹೇಳಿದೆ. ಇನ್ನು ಮಹಿಳೆಯರ ಮೇಲಿನ ದೌರ್ಜನ್ಯ 2327 ಪ್ರಕರಣಳು ನಡೆದರೆ, ಮಕ್ಕಳ ಮೇಲಿನ ದೌರ್ಜನ್ಯ 1,262 ಪ್ರಕರಣಗಳು ವರದಿಯಾಗಿವೆ.
ಹಲ್ಲೆ ಪ್ರಕರಣಗಳು 6,063 ನಡೆದರೆ, ಸೈಬರ್ ಕ್ರೈಂ 7,421 ನಡೆದಿದೆ. ಇನ್ನು ವಂಚನೆ 2,243, ಸುಳಿಗೆ 450 ಪ್ರಕರಣಗಳು ವರದಿಯಾಗಿದ್ದು, 2022 ರಲ್ಲಿ 1370 ಕೊಲೆ ಪ್ರಕರಣಗಳು ನಡೆದರೆ, 2023 ರಲ್ಲಿ 1295 ವರದಿಯಾಗಿದೆ.
ರಾಜ್ಯವು ಅತ್ಯಾಚಾರಿಗಳ ಆಡಂಬೋಲವಾಗಿದೆ. ಬೆಂಗಳೂರು ಮಹಾನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ. ಕೇವಲ 4 ತಿಂಗಳಲ್ಲಿ ಇಷ್ಟೆಲ್ಲಾ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.ರಾಜ್ಯ ಗೃಹ ಇಲಾಖೆ ಎನ್ನುವುದು ಕೆಲಸ ಮಾಡುತ್ತಿದೆಯಾ? ಅಥವಾ ನಿದ್ದೆ ಮಾಡುತ್ತಿದೆಯಾ? ದಯಮಾಡಿ ಹೇಳುವಿರಾ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರನ್ನು ಪ್ರಶ್ನಿಸಿದರು.