ಬೆಂಗಳೂರು: ನನ್ನ ಮಗ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಇರುವವರೆಗೂ ಮುಖ್ಯಮಂತ್ರಿ ಮಾಡುತ್ತೇನೆ. ಇಂದೇ ರಾಜೀನಾಮೆ ಕೊಟ್ಟು ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ (PM Nanrenda Modi) ಅವರು ಆಫರ್ ಕೊಟ್ಟಿದ್ದರು. ಇಂದು ರಾಜೀನಾಮೆ ಕೊಟ್ಟು ಬಂದರೆ ನಾಳೆಯೇ ಸಿಎಂ ಮಾಡುತ್ತೇನೆ ಎಂದು ಹೇಳಿದ್ದರು.
ಈ ವಿಷಯವನ್ನು ನಾನು ಇಂದು ಬಹಿರಂಗವಾಗಿ ಹೇಳುತ್ತಿದ್ದೇನೆ. ಆದರೆ, ಕುಮಾರಸ್ವಾಮಿ ಇದನ್ನು ನಿರಾಕರಿಸಿ ಬಂದರು. ಮತ್ತೆ ತಂದೆಯವರಿಗೆ ನೋವು ಕೊಡುವುದಿಲ್ಲ ಎಂದು ತಿರಸ್ಕರಿಸಿ ಬಂದಿದ್ದರು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ (Former Prime Minister HD Deve Gowda) ಮಾಹಿತಿ ನೀಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದ ಎಚ್.ಡಿ. ದೇವೇಗೌಡ, ಈ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಜೆಪಿ ಸೇರಲು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಆಹ್ವಾನ ನೀಡಿದ್ದರು ಎಂಬರ್ಥದಲ್ಲಿ ಮಾಹಿತಿ ನೀಡಿದರು.
ನಾನು ಮತ್ತೆ ಸ್ಪರ್ಧೆ ಮಾಡುವುದಿಲ್ಲ ಎಂದು ಸಂಸತ್‌ನಲ್ಲಿಯೇ ಹೇಳಿದ್ದೆ. ಈ ಪಕ್ಷವನ್ನು ಮುಗಿಸೋಕೆ ನಿಮ್ಮಿಂದ ಆಗುತ್ತಾ? ಈ ಪಾರ್ಟಿಯನ್ನು ಮುಗಿಸುತ್ತೀರಾ? ಕೇರಳದಲ್ಲಿ ನನ್ನ ಪಕ್ಷ ಇದೆ. ಮಮತಾ ಬ್ಯಾನರ್ಜಿ ವಿರುದ್ಧ ಕಾಂಗ್ರೆಸ್, ಕಮ್ಯುನಿಸ್ಟ್ ಒಟ್ಟಾಗಿ ಹೋದರು. ತ್ರಿಪುರದಲ್ಲಿ ನೀವೆಲ್ಲಾ ಒಂದಾಗಿ ಹೋಗಿಲ್ಲವಾ? ಆದರೆ, ಏನಾಯಿತು? ಈ ದೇಶದಲ್ಲಿ ಯಾವ ನೀತಿ ಇದೆ? ಯಾವ ತತ್ವವೂ ಈ ದೇಶದಲ್ಲಿ ಇಲ್ಲ ಎಂದು ಎಚ್.ಡಿ. ದೇವೇಗೌಡ ಹೇಳಿದರು.
40 ವರ್ಷ ಈ ಪಕ್ಷವನ್ನು ಉಳಿಸಿದ್ದೇನೆ. ಕುಮಾರಸ್ವಾಮಿ ಬಿಜೆಪಿ ಜತೆಗೆ ಹೋದಾಗಲೂ ನಾನು ಪಕ್ಷ ಉಳಿಸಿದ್ದೆ. ಮೂರು ತಿಂಗಳು ಹಾಸಿಗೆ ಹಿಡಿದಿದ್ದೆ. ಆದರೂ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.
ಮಹಿಳಾ ಮೀಸಲಾತಿ ಕೊಟ್ಟವರು ಯಾರು?
ಆಗ ಸರ್ಕಾರ ಬೀಳುತ್ತಿದ್ದಾಗ ಅಟಲ್ ಬಿಹಾರಿ ವಾಜಪೇಯಿ ಅವರು ನಿಮ್ಮ ಸರ್ಕಾರವನ್ನು ಉಳಿಸುತ್ತೇವೆ ಎಂದು ಹೇಳಿದ್ದರು. ನಾನು ಬೇಡ ಅಂತ ಬಂದೆ. ಸಿದ್ದರಾಮಯ್ಯ ಅವರೇ ನಿಮ್ಮ ಅಹಿಂದಾನಾ? ಮಹಿಳೆಯರಿಗೆ ಮೀಸಲಾತಿ ಕೊಟ್ಟವರು ಯಾರು? ಈದ್ಗಾ ಬಗೆಹರಿಸಿದ್ದು ಯಾರು? ಅದೆಲ್ಲವನ್ನು ಮಾಡಿದ್ದು ನಾನು. ಸಿದ್ದರಾಮಯ್ಯ ಅವರೇ ಸತ್ಯ ಹೇಳಿ. ಪಾರ್ಟಿ ಕಚೇರಿ ಯಾವ ರೀತಿ ತೆಗೆದರು? ಯಾವ ಸ್ಥಿತಿಯಲ್ಲಿ ಇದ್ದೆ ನಾನು? ಲಾಯರ್ ಕೊಟ್ಟ ಸಲಹೆಗೆ ವಿರುದ್ಧವಾಗಿ ನಡೆದುಕೊಂಡು ಬಿಲ್ಡಿಂಗ್ ಬಿಟ್ಟು ಹೋದೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.
ನಾವು ಪಕ್ಷವನ್ನು ಉಳಿಸೋಣ; ಕಾರ್ಯಕರ್ತರು, ಮುಖಂಡರಿಗೆ ದೇವೇಗೌಡ ಕರೆ
ನನಗೆ ಈಗ 91 ವರ್ಷ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿಯಬೇಕು. ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ನನಗೋಸ್ಕರ ಪಕ್ಷ ಉಳಿಯುವುದು ಬೇಡ ಎಂದು ಎಚ್.ಡಿ. ದೇವೇಗೌಡ ಭಾವುಕರಾಗಿ ಹೇಳಿದರು.
ಇತಿಹಾಸದ ಪುಟದಲ್ಲಿ ಎಲ್ಲವೂ ಇದೆ. ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಎಲ್ಲವನ್ನೂ ನೋಡಿದ್ದೇವೆ. ಅಪ್ಪ ಏನ್ ತೀರ್ಮಾನ ಮಾಡುತ್ತಾನೆ. ಮಗ ಏನ್ ತೀರ್ಮಾನ ಮಾಡುತ್ತಾರೆ ನೋಡೋಣ ಅಂತ ಒಬ್ಬ ನಾಯಕ ಹೇಳುತ್ತಾರೆ. ಇಲ್ಲಿಯೇ ಕುಳಿತಿದ್ದಾರೆ ಎಚ್.ಡಿ. ಕುಮಾರಸ್ವಾಮಿ. ನಾವು ಪಕ್ಷ ಉಳಿಸಿಕೊಳ್ಳಬೇಕು ಎಂದು ಎಚ್.ಡಿ. ದೇವೇಗೌಡ ಕರೆ ನೀಡಿದರು.