ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣದಲ್ಲಿ ಜೈಲಲ್ಲಿ ಇರುವ ಆರೋಪಿಯ ಮೊಬೈಲ್‌ನಲ್ಲಿ ಇದ್ದ ಫೋಟೋ ಹರಿ ಬಿಟ್ಟವರು ಯಾರು? ರಾಜ್ಯ ಸರ್ಕಾರವೇ ಇದನ್ನು ಮಾಡಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫಯಾಜ್ ಪೊಲೀಸ್ ಕಸ್ಟಡಿಯಲ್ಲಿರುವಾಗ ಯಾರು? ಹೇಗೆ ಫೋಟೋ ಲೀಕ್ ಮಾಡಲು ಸಾಧ್ಯ? ಸರ್ಕಾರವೇ ಇದನ್ನು ಮಾಡಿಸಿದ್ದು, ನೇಹಾ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸರಿಯಾಗಿ ನಿಭಾಯಿಸಲಿಲ್ಲ. ನಿರಂಜನ್ ಕುಟುಂಬದ ಬೇಡಿಕೆಯಂತೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಹಿಂದೂ ನೆಲೆಗಟ್ಟಿನ, ಹಿಂದೂ ಸಮಾಜ-ಸಂಘಟನೆ ಗಟ್ಟಿಯಾಗಿರುವ ಹುಬ್ಬಳ್ಳಿ ನೆಲದಲ್ಲೇ ಹೀಗಾಗಿರುವಾಗ ಇನ್ನು ರಾಜ್ಯದ ಬೇರೆಡೆ ಸ್ಥಿತಿ ಏನಾಗಿರಬೇಡ? ಎಂದು ಆತಂಕ ವ್ಯಕ್ತಪಡಿಸಿದರು. ತುಷ್ಟೀಕರಣ ಮಾಡುವವರನ್ನು ಮೊದಲು ಅಧಿಕಾರದಿಂದ ಕಿತ್ತು ಹಾಕಬೇಕು. ಇಲ್ಲದಿದ್ದರೆ ನಮ್ಮ ಮನೆಗಳಲ್ಲೂ ನಾವು ಹಿಂದೂ ಧರ್ಮ-ಸಂಸ್ಕೃತಿ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.
ನೇಹಾ ಹತ್ಯೆ ಪ್ರಕರಣದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ಹುಡುಗಿ ಮೇಲೆ ಹಲ್ಲೆ ನಡೆದಿದೆ. ಮತಾಂತರಕ್ಕೆ ಒಪ್ಪದಿದ್ದಾಗ ಯುವತಿಯನ್ನು ಮನಬಂದಂತೆ ಥಳಿಸಿದ್ದಾರೆ ಎಂದರೆ ಕಾನೂನು ಸುವ್ಯವಸ್ಥೆ ಎಲ್ಲಿದೆ ಎಂದು ಜೋಶಿ ಕಿಡಿಕಾರಿದರು.