ನವದೆಹಲಿ: ”ಸಾರ್ವಜನಿಕರ ಹಕ್ಕುಗಳನ್ನು ಎತ್ತಿಹಿಡಿಯುವ ಉದ್ದೇಶಕ್ಕಾಗಿಯೇ ನ್ಯಾಯಾಂಗವಿದೆ. ಇಲ್ಲಿ ಉತ್ತರದಾಯಿತ್ವದಿಂದ ಹೊರತಾಗಿ ಯಾರೂ ಇಲ್ಲ. ಭಾಗವಾಗಿರುವ ನ್ಯಾಯಾಧೀಶರು ರಾಜಕುಮಾರರೂ ಅಲ್ಲ, ಸಾರ್ವಭೌಮರೂ ಅಲ್ಲ,” ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅಭಿಪ್ರಾಯಪಟ್ಟರು.
ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಬ್ರೆಜಿಲ್‌ನ ಫೆಡರಲ್ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ಆಯೋಜಿಸಿರುವ ಜೆ- 20 ಶೃಂಗದಲ್ಲಿ ಮಂಗಳವಾರ ಮಾತನಾಡಿದ ಅವರು, “ಚುನಾವಣಾ ಸೋಲಿನ ಭಯವಿಲ್ಲದೆ, ಸ್ಥಾಪಿತ ವೇದಿಕೆಯಲ್ಲಿ ಕುಳಿತು ನಿಯಮ ಉಲ್ಲಂಘನೆಗೆ ದಂಡಿಸುವ, ಖಾಸಗಿ ಚೇಂಬರ್‌ನಲ್ಲಿ ಬೇರೆಯವರ ಜೀವನದ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾರ್ವಜನಿಕ ವ್ಯಕ್ತಿಗಳೆಂದರೆ ಬಹುಶಃ ನ್ಯಾಯಾಧೀಶರು ಮಾತ್ರ” ಎಂದು ಹೇಳಿದರು.
“ನಾವು ಇಂದು ನಿರ್ಣಯ ಕೈಗೊಳ್ಳುವ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯ ವಿವರಣೆ ಕುರಿತಾದ ಚರ್ಚೆಗಳನ್ನು ನಡೆಸುತ್ತಿದ್ದೇವೆ. ಇದರ ಅರ್ಥ, ಕಪ್ಪು ಪೆಟ್ಟಿಗೆಯಲ್ಲಿದ್ದು ಎಐ ನಿರ್ಧಾರ ತೆಗೆದುಕೊಳ್ಳಲಾಗದು. ನಾವು ಏನು ಮಾಡಿದ್ದೇವೆಯೋ ಅದರ ಬಗ್ಗೆ ವಿವರಣೆ ಇರಲೇಬೇಕು. ನ್ಯಾಯಾಧೀಶರಾಗಿ ನಾವು, ವಿವರಣೆಯ ಅಗತ್ಯವುಳ್ಳ ನಮಗಿಂತಲೂ ಮೇಲಿನವರಾದ ರಾಜಕುಮಾರರಲ್ಲ, ಸಾರ್ವಭೌಮರೂ ಅಲ್ಲ. ನಾವು ಸೇವಾ ಪೂರೈಕೆದಾರರು. ಹಕ್ಕುಗಳು ದೃಢೀಕರಿಸಿದ ಸಮಾಜವನ್ನು ಸಕ್ರಿಯಗೊಳಿಸುವವರು” ಎಂದು ವಿವರಿಸಿದರು.
ಡಿಜಿಟಲ್ ಪರಿವರ್ತನೆ ಮತ್ತು ತಂತ್ರಜ್ಞಾನದ ಬಳಕೆಯು ನ್ಯಾಯಾಂಗದ ಕಾರ್ಯಕ್ಷಮತೆಯನ್ನು ಹೆಚ್ಚಿಸಿದೆ. ವರ್ಚುವಲ್ ವಿಚಾರಣೆ ಮೂಲಕ ಸುಪ್ರೀಂ ಕೋರ್ಟ್ ತಲುಪಲು ಪ್ರತಿ ಪ್ರಜೆಗೂ ಸಾಧ್ಯವಾದಂತಾಗಿದೆ,” ಎಂದು ತಿಳಿಸಿದರು.