This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local NewsNational NewsPolitics NewsState News

ಬಿಜೆಪಿಯಲ್ಲಿ ಜುಗಲ್ ಬಂಧಿ

ಬಿಜೆಪಿಯಲ್ಲಿ ಜುಗಲ್ ಬಂಧಿ

ಯಾರೋ ಗೀರಿದ ಕಡ್ಡಿಯ ಬೆಂಕಿ ಬಿಜೆಪಿ ಅಂಗಳದಲ್ಲಿ ಉರಿಯುತ್ತಿದೆ

ಬಾಗಲಕೋಟೆ

ನಿರ್ಲಕ್ಷ್ಯದ ಒಂದು ಕಿಡಿ ಮನೆಯನ್ನೇ ಸುಟ್ಟು ಹಾಕಿದಂತೆ, ಬಿಟಿಡಿಎ ನಿಯಮ ಬಾಹಿರವಾಗಿ ಹಂಚಿಕೆ ಮಾಡಿದ್ದ ನಿವೇಶನ ರದ್ದತಿಯ ಕಿಡಿ ಹಾರಿ ಬಂದು ಬಿಜೆಪಿ ಅಂಗಳದಲ್ಲಿ ಬಿದ್ದಿರುವ ಪರಿಣಾಮ ಅದು ಧಗಧಗಿಸಿ ಉರಿಯಲಾರಂಭಿಸಿದೆ.

ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಬಿಟಿಡಿಎ ಹಂಚಿಕೆ ನಿವೇಶನಗಳ ರದ್ದತಿಯಲ್ಲಿ ಸ್ವಪಕ್ಷೀಯ ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ್ ಕಾರಣರು ಎಂದು ನೇರವಾಗಿ ಆರೋಪಿಸಿದ್ದು, ಮಡುಗಟ್ಟಿದ್ದ ಅಸಮಾಧಾನ ಸ್ಪೋಟಕ್ಕೆ ಕಾರಣವಾಗಿದೆ.

ವಿಷಯ ಕೇವಲ ನಿವೇಶನ ಹಂಚಿಕೆ ರದ್ದತಿಗೆ ಸಿಮೀತಗೊಳ್ಳದೇ ವೈಯಕ್ತಿಕ ಆರೋಪ, ಪ್ರತ್ಯಾರೋಪ ನಿಂದನೆಗಳು ಆರಂಭಗೊಂಡಿವೆ. ಪರಸ್ಪರರ ನಡುವೆ ನಡೆದಿರುವ ಬಹಿರಂಗ ಸಮರ ಪಕ್ಷದಲ್ಲಿ ತಲ್ಲಣವನ್ನುಂಟು ಮಾಡಿದ್ದರೂ, ಹಿರಿಯ‌‌ ಮುಖಂಡರಿಬ್ಬರ ನಡುವಿನ ವೈಯಕ್ತಿಕ ರಾಜಕೀಯ ನಿಂದನೆಗಳು ಪಕ್ಷದ‌ ಮೇಲೆ ಸಹಜವಾಗಿಯೇ ಪರಿಣಾಮ ಬೀರಲಿವೆ ಎನ್ನುವ ಮಾತನ್ನು ಬಿಜೆಪಿಯ ಯಾವ ಕಾರ್ಯಕರ್ತರೂ ಅಲ್ಲ ಗಳೆಯುತ್ತಿಲ್ಲ.

ಕಳೆದ ನಾಲ್ಕೈದು ದಿನಗಳಿಂದ ನಡೆಯುತ್ತಿರುವ ಪರಸ್ಪರ ನಿಂದನಾ ಕಾರ್ಯದಲ್ಲಿ ಏಕ ವಚನ ಪದಗಳು ವಿಜಭಿಸುತ್ತಿವೆ. ಬಿಜೆಪಿ ಮುಖಂಡರ ಸಂಸ್ಕೃತಿ ಇಷ್ಟೊಂದು ಕೀಳು ಮಟ್ಟದಿಂದ ಕೂಡಿದೆಯಾ ಎನ್ನುವ ಚರ್ಚೆ ವ್ಯಾಪಕವಾಗಿದೆ. ಬಿಜೆಪಿ ಮುಖಂಡರಿಬ್ಬರ ವರ್ತನೆ ಬಹಿರಂಗವಾಗಿ ಅವರ ರಾಜಕೀಯ ಮುಖವಾಡ ಬೆತ್ತಲಾಗುವಂತೆ ಮಾಡಿದೆ.

ಬಿಜೆಪಿ ಮೇಲ್ಮನೆ ಸದಸ್ಯ ಮತ್ತು ಮಾಜಿ ಶಾಸಕರ ನಡುವೆ ಎಷ್ಟೆಲ್ಲ ರಾಜಕೀಯ ಪ್ರಹಸನ‌ ನಡೆಯುತ್ತಿದ್ದರೂ ರಾಜ್ಯದ ಬಿಜೆಪಿ ನಾಯಕರಾಗಲಿ, ಜಿಲ್ಲೆಯ ಬಿಜೆಪಿ ಮುಖಂಡರಾಗಲಿ ಮುಖ ಪ್ರೇಕ್ಷಕರಾಗಿ ನೋಡುತ್ತ ಕುಳಿತಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಹೇಗೆ ಎಲ್ಲವೂ ಸರಿಯಿಲ್ಲವೋ ಹಾಗೇ ಜಿಲ್ಲಾ ಬಿಜೆಪಿಯಲ್ಲೂ ಸರಿಯಿಲ್ಲ ಎನ್ನುವ ಅಂಶ ಸ್ಪಷ್ಟವಾಗಿದೆ. ಜಿಲ್ಲೆಯವರೇ ರಾಜ್ಯ ಬಿಜೆಪಿ ಉಪಾಧ್ಯಕ್ಷ ಇದ್ದಾರೆ. ಅವರ ಗಮನಕ್ಕೆ ಬಂದಿದೆಯೋ ಇಲ್ಲವೋ ಎನ್ನುವ ಗೊಂದಲವಿದೆ. ಗೊತ್ತಿದ್ದೂ ಮೌನವಾಗಿದ್ದಾರೋ ಏನೋ ಎನ್ನುವ ಪ್ರಶ್ನೆ ಪಕ್ಷದ ಕಾರ್ಯಕರ್ತರನ್ನು ಕಾಡಲಾರಂಭಿಸಿದೆ.

ಮುಖಂಡರಿಬ್ಬರ ನಡುವೆ ಏನೇ ಅಸಮಾಧಾನ ಇದ್ದರೂ ಅದನ್ನು ಪಕ್ಷದ ವೇದಿಕೆಯಲ್ಲೇ ಬಗೆ ಹರಿಸಿಕೊಳ್ಳಬೇಕಿತ್ತು. ಅದು ಬಿಟ್ಟು ಸಾರ್ವಜನಿಕವಾಗಿ ತೀರಾ ವೈಯಕ್ತಿಕವಾಗಿ ಏಕ ವಚನದಲ್ಲಿ ಪರಸ್ಪರ ನಿಂದನೆಗೆ ಇಳಿದಿದ್ದು, ಪಕ್ಷದ ಕಾರ್ಯಕರ್ತರು ತಲೆ ತಗ್ಗಿಸುವಂತಾಗಿದೆ.

ಇದು ಹೀಗೆ ಮುಂದುವರಿಯುವುದು ಯಾರಿಗೂ ಬೇಕಿಲ್ಲ. ಎಲ್ಲರೂ ಒಟ್ಟಾಗಿ ಆಡಳಿತ ಪಕ್ಷದ ವಿರುದ್ಧ ರಚನಾತ್ಮಕ ಹೋರಾಟ ಮಾಡಬೇಕಿರುವ ಸಮಯದಲ್ಲಿ ಸ್ವಪಕ್ಷಿಯರೇ ಪರಸ್ಪರ ಕೆಸರಾಟದಲ್ಲಿ ತೊಡಗಿದ್ದು, ಪಕ್ಷದಲ್ಲಿ ಇವರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲವೇನೋ?. ಹೀಗೆಕೆ ಮಾಡುತ್ತಿದ್ದೀರಿ ಎಂದು ಕೇಳುವ ಧೈರ್ಯ ಪಕ್ಷದ ವರಿಷ್ಠರಿಗೆ ಇಲ್ಲವೇನೋ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದ್ದು, ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಯಾರೋ ಹುಟ್ಟು ಹಾಕಿರುವ ಬಿಟಿಡಿಎ ಹಂಚಿಕೆ ನಿವೇಶನ ರದ್ದತಿ ವಿಷಯ ಇನ್ನಾರಿಗೋ ತಗಲು ಹಾಕಿಕೊಂಡಿರುವು ದನ್ನು ನೋಡಿ ಕಾಂಗ್ರೆಸ್ಸಿಗರು ಅಚ್ಚರಿಯಿಂದ ಗಮನಿಸು ವಂತೆ ಮಾಡಿದೆ.

ಬಿಜೆಪಿ ಮುಖಂಡರಿಬ್ಬರ ನಡುವಿನ ಅಸಮಾಧಾನದ ಹೊಗೆ ಇನ್ನಷ್ಟು ದಟ್ಟವಾಗುವ ಮುನ್ನವೇ ತಣಿಸುವ ಕೆಲಸ ಪಕ್ಷದ ವರಿಷ್ಠರಿಂದ ಆಗಬೇಕಿದೆ. ಇದು ಎಷ್ಟರ ಮಟ್ಟಿಗೆ ಆಗಲಿದೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.

– ವಿಠ್ಠಲ ಬಲಕುಂದಿ

Nimma Suddi
";