ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ನಿನ್ನೆ ಸಾಯಂಕಾಲ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಅವರ ಪರ ಮತ ಯಾಚಿಸಿದ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ದೇಶದ ಪ್ರಧಾನಿಮಂತ್ರಿಯಾಗಲು ಅರ್ಹತೆ ಮತ್ತು ಯೋಗ್ಯತೆ ಬೇಕು, ಆ ಯೋಗ್ಯತೆ ಇಂಡಿಯ ಒಕ್ಕೂಟದ ಒಬ್ಬ ನಾಯಕನಲ್ಲೂ ಇಲ್ಲ ಎಂದು ಹೇಳಿದರು.
ವಿರೋಧ ಪಕ್ಷಗಳ ಒಕ್ಕೂಟದಲ್ಲಿ, ಫರೂಕ್ ಅಬ್ದುಲ್ಲಾ ಮಮತಾ ಬ್ಯಾನರ್ಜೀ, ರಾಹುಲ್ ಗಾಂಧಿ, ಎಂಕೆ ಸ್ಟಾಲಿನ್ ಮೊದಲಾದವರೆಲ್ಲ ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ, ಅದರೆ ಅವರ ಕನಸು ಯಾವತ್ತೂ ನನಸಾಗಲ್ಲ ಎಂದು ಅವರು ಹೇಳಿದರು. ಭದ್ರಾವತಿಯಲ್ಲಿ ತಮಿಳು ಮಾತಾಡುವ ಜನ ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ಅಣ್ಣಾಮಲೈ ತಮಿಳು ಭಾಷೆಯಲ್ಲೂ ಮಾತಾಡಿದರು.
ಪ್ರಧಾನ ಮಂತ್ರಿ ಹುದ್ದೆ ಆಟಿಕೆಯ ವಸ್ತು ಅಲ್ಲ, ಅಥವಾ ಒಂದು ಕಿಂಡರ್ಗಾರ್ಟನ್ ಶಾಲೆಯ ಟೀಚರ್ ಆದಂತಲ್ಲ ಎಂದ ಅಣ್ಣಾಮಲೈ, ದೇಶದಲ್ಲಿ ಪ್ರಧಾನಮಂತ್ರಿಯಯಾಗುವ ಯೋಗ್ಯತೆ ಕೇವಲ ನರೇಂದ್ರ ಮೋದಿಯವರಿಗಿದೆ, ಅವರನ್ನು ಮೂರನೇ ಬಾರಿ ಪ್ರಧಾನಿಯಾಗಿಸಲೆಂದೇ ನಿಮ್ಮ ಸಹಕಾರ ಕೋರಲು ಬಂದಿದ್ದೇವೆ ಎಂದರು.