ಬೆಂಗಳೂರು: ಕನ್ನಡ ಸಂಘಟನೆಗಳು ನಡೆಸುತ್ತಿರುವ ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ಕೂಡ ಬೆಂಬಲ ಸೂಚಿಸಿದೆ. ಸ್ವತಃ ನಟರೇ ರಸ್ತೆಗಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಚಿತ್ರೋದ್ಯಮ ಬಂದ್ ಮಾಡುವ ಮೂಲಕ ಹೋರಾಟಕ್ಕೆ ಇಳಿಯುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೊನ್ನೆ ಹೇಳಿಕೆ ನೀಡಿತ್ತು. ಆದರೆ, ಈ ಹೋರಾಟದ ನೇತೃತ್ವವನ್ನು ನಟ ಶಿವರಾಜ್‌ಕುಮಾರ್ ಹೊರಲಿದ್ದಾರೆ. ಗುರುವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶಿವರಾಜ್‌ಕುಮಾರ್ ನಿವಾಸಕ್ಕೆ ಆಗಮಿಸಿ, ಶುಕ್ರವಾರದ ಹೋರಾಟಕ್ಕೆ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಎಲ್ಲಿ ಸ್ಯಾಂಡಲ್‌ವುಡ್ ನಟರ ಪ್ರತಿಭಟನೆ?
ಶಿವರಾಜ್ ಕುಮಾರ್ ನೇತೃತ್ವದಲ್ಲಿ ಗುರುರಾಜ್ ಕಲ್ಯಾಣ ಮಂಟಪದ ಬಳಿ ಚಿತ್ರೋದ್ಯಮ ಹೋರಾಟಕ್ಕೆ ಇಳಿಯಲಿದೆ. ಸೀರಿಯಲ್, ಸಿನಿಮಾ ಚಿತ್ರೀಕರಣ, ಚಿತ್ರ ಪ್ರದರ್ಶನ ಸೇರಿದಂತೆ ಎಲ್ಲಾ ಚಟುವಟಿಕೆ ಬಂದ್ ಮೂಲಕ ಚಿತ್ರೋದ್ಯಮ ಸಾಥ್ ನೀಡುತ್ತಿದೆ.
ಪ್ರಮುಖ ನಟರಯ ಯಾರೆಲ್ಲಾ ಭಾಗಿ
ಪ್ರತಿಭಟನೆಯಲ್ಲಿ ರಾಘಧಿವೇಂದ್ರ ರಾಜ್‌ಕುಮಾರ್, ಉಪೇಂದ್ರ, ನೆನಪಿರಲಿ ಪ್ರೇಮ್, ಅಜಯ್ ರಾವ್, ಪ್ರಜ್ವಲ್ ದೇವರಾಜ್, ರಂಗಾಯಣ ರಘು, ಸಾಧು ಕೋಕಿಲಾ, ಕಿರುತೆರೆ ನಟ- ನಟಿಯರು ಭಾಗಿಯಾಗುವ ಸಾಧ್ಯತೆ ಇದೆ.
ನೆಲ ಜಲ ಭಾಷೆ ವಿಚಾರಕ್ಕೆ ನಮ್ಮ ಪ್ರಾಣ ಕೊಡಲು ಸಿದ್ಧ ಎಂದು ನಮ್ಮ ತಂದೆ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಇಡೀ ಕುಟುಂಬ ಸಿನಿಮಾ ಇಂಡಸ್ಟ್ರಿ ರೈತರ ಜೊತೆ ನಿಲ್ಲುತ್ತೇವೆ ಎಂದು ಇತ್ತೀಚೆಗೆ ರೈತರ ಹೋರಾಟಕ್ಕೆ ನಟ ರಾಘವೇಂದ್ರ ರಾಜಕುಮಾರ್ ಬೆಂಬಲ ಸೂಚಿಸಿದ್ದರು.
ಸಂಜೆ ಬಳಿಕ ಸಿನಿಮಾ ಶೋ ಆರಂಭ
ಚಿತ್ರಮಂದಿರಗಳು ಬೆಳಗ್ಗೆಯಿಂದ ಸಂಜೆಯವರೆಗೂ ಬಂದ್ ಆಗಲಿದ್ದು, ಸಂಜೆ ಶೋಗಳು ಯಥಾಸ್ಥಿತಿ ನಡೆಯಲಿವೆ ಎಂದು ಪ್ರದರ್ಶಕರ ಸಂಘ ಸಹ ತಿಳಿಸಿದೆ.
ಮಂಡ್ಯ ಪ್ರತಿಭಟನೆಯಲ್ಲಿ ಲೀಲಾವತಿ, ವಿನೋದ್‌ರಾಜ್ ಭಾಗಿ
ಕಾಂಗ್ರೆಸ್ ಬೆಂಬಲಿಸಿದ ಸರ್ವೋದಯ ಕರ್ನಾಟಕ ಪಕ್ಷದ ಮೇಲುಕೋಟೆ ಕ್ಷೇತ್ರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರೂ ಇತ್ತೀಚೆಗೆ ನಡೆಸಿದ ಕಾವೇರಿ ಧರಣಿಯಲ್ಲಿ ಚಿತ್ರನಟಿ ಲೀಲಾವತಿ, ಅವರ ಪುತ್ರ ಮತ್ತು ನಟ ವಿನೋದ್‌ರಾಜ್ ಅವರು ಭಾಗಿಯಾಗಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ರೈತಸಂಘ, ಜಯ ಕರ್ನಾಟಕ ಸಂಘಟನೆ ಕಾರ‍್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಜ್ಞರ ಜತೆ ಚರ್ಚೆ
ಕಾವೇರಿ ಸಂಕಷ್ಟ ಪರಿಸ್ಥಿತಿಯನ್ನು ಕಾನೂನು ಚೌಕಟ್ಟಿನಲ್ಲೇ ಎಚ್ಚರಿಕೆಯಿಂದ ನಿಭಾಯಿಸುವ ಕುರಿತು ಮಾರ್ಗದರ್ಶನ ಪಡೆಯಲು ರಾಜ್ಯ ಸರಕಾರ ಶುಕ್ರವಾರ ತಜ್ಞರ ಸಭೆ ಕರೆದಿದೆ. ರಾಜ್ಯದ ನಿವೃತ್ತ ನ್ಯಾಯಮೂರ್ತಿಗಳು, ಪರಿಣಿತ ವಕೀಲರು, ಕಾನೂನು ತಜ್ಞರು, ನೀರಾವರಿ ವಿಷಯದ ಪರಿಣಿತರು ಹಾಗೂ ಅನುಭವಿಗಳನ್ನು ಆಹ್ವಾನಿಸಲಾಗಿದೆ.
ಬಂದ್ ದಿನವೇ ಪ್ರಾಧಿಕಾರದ ಸಭೆ
ಕಾವೇರಿ ನೀರಿನ ವಿಚಾರವಾಗಿ ಇತ್ತ ರಾಜ್ಯದಲ್ಲಿಬಂದ್‌ಗೆ ಕರೆ ನೀಡಲಾಗಿರುವ ದಿನವೇ ಅತ್ತ ದಿಲ್ಲಿಯಲ್ಲಿಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ(ಸಿಡಬ್ಲ್ಯೂಎಂಎ) ಸಭೆಯು ನಡೆಯಲಿದೆ. ಸಭೆಯಲ್ಲಿರಾಜ್ಯದ ಅಧಿಕಾರಿಗಳು ವಿಡಿಯೊ ಕಾನ್ಫರೆನ್ಸ್ ಬದಲಿಗೆ ಖುದ್ದಾಗಿ ಹಾಜರಾಗಬೇಕು ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ.