ಬೆಂಗಳೂರು: ವ್ಯಾಪಾರ ಪರವಾನಗಿ ನವೀಕರಣಕ್ಕೆ ಮಳಿಗೆ ಬಾಡಿಗೆ ಪಡೆದಿರುವ ಮಾಲೀಕರಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯಲೇಬೇಕೆಂದು ಬಿಬಿಎಂಪಿ ಒತ್ತಡ ಹೇರುವಂತಿಲ್ಲ. ಇದಕ್ಕೆ ಎನ್‌ಒಸಿ ಕಡ್ಡಾಯವೇನೂ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿರುವ ಮಾಹಿತಿ ಬೆಳಕಿಗೆ ಬಂದಿದೆ.
ವೆಲ್‌ವೆಟ್ ಹೆಸರಿನಲ್ಲಿ ಹೋಟೆಲ್ ನಡೆಸುತ್ತಿರುವ ಪಂಚರತ್ನ ಎಂಟರ್‌ಪ್ರೈಸಸ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ. ಎಸ್. ಸುನಿಲ್‌ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ಮಾಡಿದೆ.
ಬಿಬಿಎಂಪಿ ಕಾಯಿದೆ-2020ರ ಸೆಕ್ಷನ್ 305ರಡಿ ಪರವಾನಗಿ ನೀಡಲಾಗಿದೆ. ಆದರೆ, ಆ ನವೀಕರಣ ಕುರಿತ ಪ್ರಕ್ರಿಯೆಗಳನ್ನು ನಿಯಮಗಳಲ್ಲಿ ಉಲ್ಲೇಖಿಸಬೇಕಿತ್ತು. ಆದರೆ, ಬಿಬಿಎಂಪಿ ಯಾವುದೇ ನಿಯಮಗಳನ್ನು ರೂಪಿಸಿಲ್ಲದೆ ಇರುವುದರಿಂದ ಸಂವಿಧಾನದ ಕಲಂ 19(1)(ಜಿ) ಪ್ರಕಾರ ಮೂಲಭೂತ ಹಕ್ಕುಗಳಿಗೆ ತಡೆಯೊಡ್ಡಲು ಆಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಹೋಟೆಲ್ ಮುಚ್ಚುವ ಬಿಬಿಎಂಪಿ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಾಲಯ, ಭೂ ಮಾಲೀಕರಿಗೆ ಎನ್‌ಒಸಿ ಪಡೆಯುವಂತೆ ಒತ್ತಾಯಿಸದೆ ವ್ಯಾಪಾರ ಪರವಾನಗಿ ನವೀಕರಣ ಮಾಡಿಕೊಡುವಂತೆ ಬಿಬಿಎಂಪಿಗೆ ಆದೇಶ ನೀಡಿದೆ.ಪಂಚರತ್ನ ಎಂಟರ್‌ಪ್ರೈಸಸ್ ಆರಂಭದಲ್ಲಿ ಶುಲ್ಕ ಪಾವತಿಸಿ 2019ರ ಜು.31ರಂದು ವ್ಯಾಪಾರ ಪರವಾನಗಿ ಪಡೆದು ಹೋಟೆಲ್ ಉದ್ಯಮ ನಡೆಸುತ್ತಿತ್ತು.
ಆ ಪಾಲುದಾರಿಕೆ ಸಂಸ್ಥೆಯಲ್ಲಿ ಮರು ಸ್ಥಾಪನೆಯಾಗಿ, ಬಾಲಾಜಿ ಪೋತರಾಜ್ ಅವರು ಪಾಲುದಾರರಾಗಿ ಸೇರ್ಪಡೆಯಾದರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಅವರು 2023ರ ಜ 6ರಂದು ವ್ಯಾಪಾರ ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು.
ಬಿಬಿಎಂಪಿ ಭೂ ಮಾಲೀಕರಿಂದ ಎನ್‌ಒಸಿ ಪಡೆಯಬೇಕೆಂದು ಸೂಚಿಸಿತ್ತು. ಆದರೆ, ಬಿಬಿಎಂಪಿ 2023ರ ಮೇ 30ರಂದು ಹೋಟೆಲ್‌ಗೆ ಬೀಗ ಹಾಕಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದಾಗ, ಅರ್ಜಿದಾರರ ವ್ಯಾಪಾರ ಪರವಾನಗಿ ನವೀಕರಣ ಅರ್ಜಿ ಪರಿಗಣಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು.