ಬೆಂಗಳೂರು: ಇದೇ ವಾರದ ಆರಂಭದಿಂದ ಮತ್ತೆ ಕರಾವಳಿಯ ಕಡೆಗೆ ಹೊರಳಿರುವ ಮುಂಗಾರು ಮಳೆ ಮಾರುತಗಳು, ಸೆ. 26ರಿಂದ ಉತ್ತರ ಕರ್ನಾಟಕದ ಕಡೆಗೂ ಲಗ್ಗೆಯಿಟ್ಟಿವೆ. ಕರಾವಳಿಯ ಜಿಲ್ಲೆಗಳಿಗೆ ಹಾಗೂ ಉತ್ತರ ಕರ್ನಾಟಕದ ಕಲಬುರಗಿ ಹಾಗೂ ಬೀದರ್ ವರೆಗೆ ಸೆ. 26ರಿಂದ ಮುಂದಿನ ಎರಡು ವಾರಗಳವರೆಗೆ ಭಾರೀ ಮಳೆ ಬೀಳುವ ಸಾಧ್ಯತೆಗಳಿದ್ದು, ಇಡೀ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ.
ಅಸಲಿಗೆ, ಸೆ. 26ರಿಂದ ಅ. 12ರವರೆಗೆ ಈ ಪ್ರಾಂತ್ಯಗಳಲ್ಲಿ ಉತ್ತಮ ಮಳೆಯಾಗುತ್ತದೆ ಎಂದು ಉಪಗ್ರಹ ಆಧಾರಿತ ಚಿತ್ರಗಳು ಹೇಳುತ್ತಿವೆ. ಅಷ್ಟೇ ಕರಾವಳಿಯ ಮೂರು ಜಿಲ್ಲೆಗಳಿಗೆ ಹಾಗೂ ಉತ್ತರ ಕನ್ನಡದ ಕಲಬುರಗಿ ಹಾಗೂ ಬೀದರ್ ಗೆ ಜಿಲ್ಲೆಗಳಲ್ಲಿ ಭಾರೀ ಮಳೆಯಾದರೆ ಅವುಗಳ ಅಕ್ಕಪಕ್ಕದ ಜಿಲ್ಲೆಗಳ ಗಡಿ ಭಾಗಗಳಲ್ಲಿ ಉತ್ತಮ ಮಳೆಯಾಗಲಿದೆ.
ಹೆಚ್ಚು ಮಳೆ ಬೀಳುವ ಜಿಲ್ಲೆಗಳು
ಉತ್ತರ ಕನ್ನಡ, ಉಡುಪಿ, ಮಂಗಳೂರು ಜಿಲ್ಲೆಗಳ ಪಶ್ಚಿಮ ಭಾಗದಲ್ಲಿರುವ ಹಾಗೂ ಸಮುದ್ರಕ್ಕೆ ಹತ್ತಿರದಲ್ಲಿರುವ ತಾಲೂಕುಗಳಲ್ಲಿ ಹೊಂದಿಕೊಂಡಿರುವ ಬಹುತೇಕ ತಾಲೂಕುಗಳಲ್ಲಿ ಉತ್ತಮವಾಗಿ ಮಳೆಯಾಗಲಿದೆ. ಈ ತಾಲೂಕುಗಳಲ್ಲಿ ಅಂದಾಜು ಸುಮಾರು 175 ಮಿ.ಮೀ.ನಿಂದ 250 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆಗಳಿವೆ.
ಉತ್ತರ ಕರ್ನಾಟಕದಲ್ಲಿ ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಅಂದಾಜು 90 ಮಿ.ಮೀ.ನಿಂದ 150 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆಗಳಿವೆ. ಕಲಬುರಗಿ, ಬೀದರ್ ನಲ್ಲಿ 90 ಮಿ.ಮೀ.ನಿಂದ 250 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆಗಳಿವೆ. ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನದ ಪಶ್ಚಿಮ ಭಾಗಗಳಲ್ಲಿ, ಕೊಡಗಿನಲ್ಲಿ ಅಂದಾಜು 175 ಮಿಮೀನಿಂದ 250 ಮಿ.ಮಿ.ವರೆಗೆ ಮಳೆಯಾಗುವ ಸಾಧ್ಯತೆಗಳಿವೆ.
ಉತ್ತಮ ಮಳೆಯಾಗುವ ಪ್ರದೇಶಗಳು
ವಿಜಯಪುರ, ಯಾದಗಿರಿ, ರಾಯಚೂರು, ಬಳ್ಳಾರಿ ಜಿಲ್ಲೆಯ ಉತ್ತರ ಹಾಗೂ ಪೂರ್ವ, ಬಾಗಲಕೋಟೆ ಜಿಲ್ಲೆಯ ಪೂರ್ವ, ಕೊಪ್ಪಳದ ಪೂರ್ವ ಹಾಗೂ ಉತ್ತರ, ಉತ್ತರ ಕನ್ನಡ ಜಿಲ್ಲೆಯ ಉತ್ತರ ಹಾಗೂ ಪೂರ್ವ ಭಾಗ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಉತ್ತರ – ಮಧ್ಯ ಹಾಗೂ ದಕ್ಷಿಣ ಭಾಗ, ಹಾಸನ ಜಿಲ್ಲೆಯ ಉತ್ತರ – ಮಧ್ಯ ಹಾಗೂ ದಕ್ಷಿಣ ಭಾಗ, ಮೈಸೂರು ಜಿಲ್ಲೆಯ ಉತ್ತರ – ಮಧ್ಯ – ದಕ್ಷಿಣ ಭಾಗ, ಹಾವೇರಿ ಜಿಲ್ಲೆಗಳಲ್ಲಿ 70 ಮಿ.ಮೀ.ನಿಂದ 100 ಮಿ.ಮೀ.ವರೆಗೆ ಮಳೆಯಾಗುವ ನಿರೀಕ್ಷೆಯಿದೆ.
ಸಾಧಾರಣ ಮಳೆಯಾಗುವ ಸಾಧ್ಯತೆಯ ಪ್ರದೇಶಗಳು
ದಾವಣಗೆರೆಯ ದಕ್ಷಿಣ ಭಾಗ, ಚಿಕ್ಕಮಗಳೂರಿನ ಪೂರ್ವ ಭಾಗ, ಚಿತ್ರದುರ್ಗ ಜಿಲ್ಲೆಯ ದಕ್ಷಿಣ ಭಾಗ, ತುಮಕೂರಿನ ದಕ್ಷಿಣ ಭಾಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ, ಮಂಡ್ಯ,ರಾಮನಗರ, ಕೋಲಾರ, ಚಾಮರಾಜ ನಗರ ಜಿಲ್ಲೆಯ ಪಶ್ಚಿಮ ಭಾಗಗಳಲ್ಲಿ ಸಾಧಾರಣ, ಅಂದರೆ, 20 ಮಿ.ಮೀ.ನಿಂದ 50 ಮಿ.ಮೀ.ವರೆಗೆ ಮಳೆಯಾಗಬಹುದು.
ಹಗುರವಾಗಿ ಮಳೆಯಾಗುವ ಪ್ರದೇಶಗಳು
ಚಿತ್ರದುರ್ಗ ಜಿಲ್ಲೆಯ ದಕ್ಷಿಣ ಭಾಗ, ಚಿಕ್ಕಮಗಳೂರಿನ ಪೂರ್ವ ಭಾಗ, ತುಮಕೂರು ಜಿಲ್ಲೆಯ ಮಧ್ಯ- ಉತ್ತರ – ದಕ್ಷಿಣ ಹಾಗೂ ಪಶ್ಚಿಮ ಭಾಗಗಳು, ಹಾಸನ ಜಿಲ್ಲೆಯ ಉತ್ತರ ಹಾಗೂ ಪೂರ್ವ ಭಾಗ, ಮೈಸೂರು ಜಿಲ್ಲೆಯ ಪೂರ್ವ ಭಾಗ ಹಾಗೂ ಚಾಮರಾಜ ನಗರ ಜಿಲ್ಲೆಯ ಮಧ್ಯ- ಉತ್ತರ – ದಕ್ಷಿಣ ಹಾಗೂ ಪೂರ್ವ ಭಾಗಗಳಲ್ಲಿ ಹಗುರ ಮಳೆ ಅಂದರೆ 10ರಿಂದ 20 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆಗಳಿವೆ.