ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಇಳಕಲ್ ತಾಲೂಕಿನ ಕೆಲೂರ ಗ್ರಾಮದಲ್ಲಿ ಗುರುಮಂಟೇಶ್ವರ ಜಾತ್ರಾ ಮಹೊತ್ಸವ ನಿಮಿತ್ತ ಫೆ.೨೬ರಿಂದ ಮಾ.೧ರ ವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಫೆ.೨೬ರಂದು ಸಂಜೆ ೪ಕ್ಕೆ ಕೆಲೂರ-ಶಿವಗಂಗಾ ಕ್ಷೇತ್ರದ ಡಾ.ಮಲಯ ಶಾಂತಮುನಿ ಶಿವಾಚಾರ್ಯರಿಗೆ ಗೌರವ ಡಾಕ್ಟರೇಟ್ ಪದವಿ ದೊರೆತ ಸವಿನೆನಪಿಗಾಗಿ ಗ್ರಾಮದ ಭಕ್ತರು, ಗೆಳೆಯರ ಬಳಗದಿಂದ ಶ್ರೀಗಳ ಮೆರವಣಿಗೆ ನಡೆಯಲಿದೆ. ನಾನಾ ವಾದ್ಯ, ಮುತೈದೆಯರ ಆರತಿ ಕಳಸದೊಂದಿಗೆ ಗ್ರಾಮದ ಮಂಟೇದೇವರ ಹಿರೇಮಠದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ನಂತರ ಶ್ರೀಗಳಿಗೆ ಗುರುವಂದನೆ ಸಲ್ಲಿಸಲಾಗುವುದು.
ಫೆ.೨೭ರಂದು ಬೆಳಗ್ಗೆ ೬ಕ್ಕೆ ಕರ್ತೃ ಗದ್ದುಗೆಗೆ ಮಹಾರುಧ್ರಾಭಿಷೇಕ, ಶ್ರೀಗಳ ಪಾದಪೂಜೆ, ೮ಕ್ಕೆ ಕಳಸ ಮೆರವಣಿಗೆ, ಸಂಜೆ ೫ಕ್ಕೆ ಮಹಾರಥೋತ್ಸವ, ೨೧೮ನೇ ಪೌರ್ಣಿಮೆ ಧರ್ಮಚಿಂತನ ಗೋಷ್ಠಿ ಜರುಗಲಿದೆ. ೨೮ರಂದು ಸಂಜೆ ೭ಕ್ಕೆ ಧರ್ಮಸಭೆ, ರಾತ್ರಿ ೮ಕ್ಕೆ ರಸಮಂಜರಿ, ಮಾ.೧ರಂದು ಕಳಸ ಅವರೋಹಣ ಕಾರ್ಯಕ್ರಮ ಜರುಗಲಿದೆ ಎಂದು ಜಾತ್ರಾ ಕಮಿಟಿ ತಿಳಿಸಿದೆ.
ನಾಲ್ಕು ದಿನ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಕ್ಷೇತ್ರದ ಮಲಯ ಶಾಂತಮುನಿ ಶಿವಾಚಾರ್ಯರು ನೇತೃತ್ವ ವಹಿಸಲಿದ್ದು, ಕೆರೂರು ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯರು, ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ.ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ಡಾ.ವೀರಣ್ಣ ಚರಂತಿಮಠ, ಡಾ.ಎಂ.ಪಿ.ನಾಡಗೌಡ, ಶಶಿಕಾಂತಗೌಡ ಪಾಟೀಲ, ಬಿ.ಎಂ.ನಾಡಗೌಡರ, ಮಹಾಲಿಂಗೌಡ ನಾಡಗೌಡರ, ಬಸವರಾಜ ನಾಡಗೌಡರ, ಎಸ್.ಎಂ.ಬೆಲ್ಲದ, ಪಿ.ಬಿ.ಮುಳ್ಳೂರ, ಡಿ.ಎಸ್.ಯತ್ನಟ್ಟಿ, ಶಾರದಾ ಗೋಡಿ, ಮಲ್ಲವ್ವ ಗೌಡರ, ಎಸ್.ಆರ್.ನವಲಿಹಿರೇಮಠ, ಎಸ್.ಜಿ.ನಂಜಯ್ಯನಮಠ, ಪರಸಪ್ಪ ದಿಡ್ಡಿಬಾಗಿಲು ಇತರರು ಆಗಮಿಸಲಿದ್ದಾರೆ.