ಬೆಂಗಳೂರು: ಬೆಂಗಳೂರಿನಲ್ಲಿ ಮಾವಿನ ಸೀಸನ್ ಆರಂಭವಾಗಿದ್ದು, ಮಾವು ಮಾರಾಟ ಕಳೆಗಟ್ಟಿದೆ. ಇದೀಗ ಲಾಲ್ ಬಾಗ್ನಲ್ಲಿ ಮಾವು ಮೇಳ ಇಂದಿನಿಂದ ಆರಂಭವಾಗಿದೆ. ಇಂದಿನಿಂದ ಜೂನ್ 10 ವರೆಗೂ ಮಾವಿನ ಮೇಳ ನಡೆಯಲಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಮಾವಿನ ಜೊತಗೆ ಹಲಸಿನ ಮೇಳ ಕೂಡ ಇರಲಿದೆ. ಮಾವಿನ ಮೇಳದಲ್ಲಿ ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಬೆಂಗಳೂರು ಗ್ರಾಮಾಂತರ, ಹಾವೇರಿ, ಧಾರವಾಡ ಸೇರಿದಂತೆ ನಾನಾ ಜಿಲ್ಲೆಗಳ ಮಾವು ಬೆಳೆಗಾರರು ಭಾಗವಹಿಸಿದ್ದು ವಾಣಿಜ್ಯ, ಪಾರಂಪರಿಕ ಮಾವಿನ ತಳಿಗಳು, ಜತೆಗೆ ಉಪ್ಪಿನಕಾಯಿಗೆ ಬಳಸುವ ಮಿಡಿ, ಮಿಡಿ ಮಾವು ಜೊತೆಗೆ ರೈತರು ಬೆಳೆದ ನಾನಾ ತಳಿಯ ಹಲಸಿನ ಹಣ್ಣನ್ನು ಮಾರಾಟ ಮಾಡಲಾಗುತ್ತದೆ.
ಈ ವರ್ಷದ ಮೇಳದಲ್ಲಿ ಬಾದಾಮಿ, ರಸಪುರಿ, ಸೇಂಧೂರ, ಮಲಗೋವ, ನೀಲಂ, ಮಲ್ಲಿಕಾ, ಆಮ್ರಪಾಲಿ, ಬಂಗನಪಲ್ಲಿ, ತೋತಾಪುರಿ, ಸಕ್ಕರೆಗುತ್ತಿ ಸೇರಿದಂತೆ ನಾನಾ ತಳಿಯ ಹಣ್ಣುಗಳಿದ್ದು, ತೋಟಗಾರಿಕೆ ಇಲಾಖೆಯೇ ಹಣ್ಣುಗಳ ಬೆಲೆ ನಿಗದಿ ಮಾಡಿದೆ.
ಈ ವರ್ಷ ತಾಪಮಾನ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರಾಜಾಧಾನಿಯಲ್ಲಿ ಮಾವಿನ ಸೀಸನ್ ತಡವಾಗಿ ಆರಂಭವಾಗಿದ್ದು, ಮಳೆ ಬಂದ ನಂತರ ಸಿಲಿಕಾನ್ ಸಿಟಿಯ ಮಂದಿ ಈಗ ಬಗೆ ಬಗೆಯ ಮಾವಿನ ಹಣ್ಣುಗಳನ್ನು ಸವಿಯುತ್ತಿದ್ದಾರೆ. ಇಂದು ತೋಟಗಾರಿಕೆ ಇಲಾಖೆ ಹಾಗೂ ಮಾವು ನಿಗಮ ಮಂಡಳಿ ಅಧಿಕೃತವಾಗಿ ಮಾವು ಮೇಳಕ್ಕೆ ಚಾಲನೆ ನೀಡಿದೆ.
ಯಾವ ತಳಿಯ ಮಾವಿನ ಹಣ್ಣಿಗೆ ಎಷ್ಟು ಬೆಲೆ (ರೂಪಾಯಿಗಳಲ್ಲಿ)?
ಬಾದಮಿ – 130
ಬಾದಾಮಿ ಬಾಕ್ಸ್ – 450
ರಸಪುರಿ – 100
ಮಲ್ಲಿಕಾ – 130
ಸೇಂದೂರ – 60
ಸಕ್ಕರೆ ಗುತ್ತಿ – 200
ಮಲಗೋವಾ – 220
ಬಂಗನಪಲ್ಲಿ – 80
ಮಲ್ಲಿಕಾ ಬಾಕ್ಸ್ – 375
ದಶೇರಿ – 137
ತೋತಾಪುರಿ – 50
ಕಾಲಾಪಾಡ್ – 135
ಅಮ್ರಪಾಲಿ – 120
ಕೇಸರ್ – 130
ಇಮಾಮ್ ಪಸಂದ್ – 250
ಆಮ್ಲೆಟ್ – 100