ಶಿವಮೊಗ್ಗ: ಹಾವೇರಿ ಲೋಕಸಭಾ ಕ್ಷೇತ್ರದಿಂದ ಪುತ್ರನಿಗೆ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿರುವ ಕೆಎಸ್ ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದು, ಈ ಬಗ್ಗೆ ಮಾತನಾಡಿದ ಅವರು, ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ತಂದೆ ಮಕ್ಕಳ ಕೈಗೆ ಪಕ್ಷ ಸಿಕ್ಕಿದೆ, ಕಾರ್ಯಕರ್ತರು ಪರದಾಡ್ತಿದ್ದಾರೆ. ಪಕ್ಷ ಉಳಿಸಲು ನನ್ನ ಈ ಹೋರಾಟ ಎಂದರು.
ಅಧಿಕೃತ ಚುನಾವಣೆ ಪ್ರಚಾರ ಎರಡು ಮೂರು ದಿನದಲ್ಲಿ ಆರಂಭಿಸುತ್ತೇನೆ. ನಿನ್ನೆ ಇಷ್ಟೊಂದು ಜನರು ಸಭೆಯಲ್ಲಿ ಸೇರುತ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ. ದೊಡ್ಡ ಸಂಖ್ಯೆಯಲ್ಲಿ ಜನರು ಬೆಂಬಲಿಗರು ಸೇರಿದ್ದು ನನಗೆ ಪ್ರೇರಣೆ ಆಯ್ತು. ಅವರ ಅಭಿಪ್ರಾಯ ಹಿನ್ನಲೆಯಲ್ಲಿ ನಾನು ಚುನಾವಣೆ ಸ್ಪರ್ಧೆ ಮಾಡುತ್ತಿದ್ದೇನೆ. ನನಗೆ ಚುನಾವಣೆ ನಿಲ್ಲಲು ಮೊದಲಿನಿಂದ ಒತ್ತಡ ಇತ್ತು. ರಾಜ್ಯ ಬಿಜೆಪಿ ಬಿಎಸ್ವೈ ಮತ್ತು ಅವರ ಕುಟುಂಬದ ಮುಷ್ಠಿಯಲ್ಲಿ ಸಿಲುಕಿದೆ. ಆಸಂಘಟನೆಯು ಅವರ ಕೈಯಲ್ಲಿ ಸಿಲುಕಿದೆ. ಇದನ್ನು ಸರಿ ಮಾಡಲು ಈ ನಿರ್ಧಾರ ತೆಗೆದುಕೊಂಡಿರುವೆ. ನಾನು ಜಗಜ್ಯೋತಿ ಬಸವಣ್ಣನವರ ಅನುಯಾಯಿ ಆಗಿ ಕ್ಷೇತ್ರದಲ್ಲಿ ಮತ ಕೇಳುತ್ತೇನೆ ಎಂದರು.
ಶಿವಮೊಗ್ಗದಲ್ಲಿ ಮಾತನಾಡಿದ ಬಿಜೆಪಿ ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ, ಪಕ್ಷ ತಂದೆ ಮಕ್ಕಳ ಕೈಗೆ ಸಿಕ್ಕಿದೆ. ಇದರಿಂದ ಕಾರ್ಯಕರ್ತರು ಪರದಾಡುತ್ತಿದ್ದಾರೆ. ಪಕ್ಷ ಉಳಿಸಲು ನನ್ನ ಈ ಹೋರಾಟ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ಲಿಂಗಾಯತ ಯತ್ನಾಳ್, ಒಕ್ಕಲಿಗರಾದ ಸಿ.ಟಿ.ರವಿ, ಹಿಂದುಳಿದ ನನಗೆ ಯಾಕೆ ಕೊಟ್ಟಿಲ್ಲ.
ಪಕ್ಷ ಸಂಘಟನೆ ದೃಷ್ಟಿಯಿಂದ ಇವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕಿತ್ತು. ಅದು ಬಿಟ್ಟು ಬಿ.ವೈ.ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರು. ನಾನು ಹಿಂದುತ್ವದ ವಿಚಾರದ ಮೇಲೆ ಚುನಾವಣೆ ಮಾಡುತ್ತೇನೆ. ರಾಘವೇಂದ್ರ ಲಿಂಗಾಯತ ಅಂತಾ ಚುನಾವಣೆ ಮಾಡುತ್ತಾರೆ. ಅವರು ಲಿಂಗಾಯತರಿಗೆ ಏನು ಕೊಟ್ಟಿದ್ದಾರೆ? ಅವರಿಗೆ ಮಾತ್ರ ಲಿಂಗಾಯತರು ಸಿಮೀತ ಆಗಿಲ್ಲ. ನಮ್ಮ ಜೊತೆ ಕೂಡಾ ಈ ಸಮಾಜ ಇದೆ. ಸ್ಪರ್ಧೆ ಬಗ್ಗೆ ಘೋಷಣೆ ಬಳಿಕ ರಾಜ್ಯಾದ್ಯಂತ ಬೆಂಬಲ ಸಿಗ್ತಿದೆ. ರಾಜ್ಯದ ವಿವಿಧ ಭಾಗದಿಂದ ಜನ ಬಂದು ಚುನಾವಣೆ ಮಾಡುತ್ತಾರೆ ಎಂದರು.