ತೀರ್ಥಹಳ್ಳಿ: ನನ್ನ ಮೈಯಲ್ಲಿ ಬಿಜೆಪಿ ರಕ್ತವೇ ಹರಿಯುತ್ತಿದ್ದು ಒಂದು ಸಿದ್ದಾಂತಕ್ಕಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಸ್ವತಂತ್ರ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಹೇಳಿದರು.
ಶುಕ್ರವಾರ ತಾಲೂಕಿನ ಅಂಬುತೀರ್ಥ ಪಟ್ಟಣದ ಮಾರಿಕಾಂಬಾ ದೇವಸ್ಥಾನ ಮತ್ತು ರಾಮೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇದೇ ಕಾರಣಕ್ಕಾಗಿ ಪಕ್ಷದ ಶಿಸ್ತನ್ನು ಮೀರಿ ಸ್ಫರ್ಧೆ ಮಾಡುತ್ತಿದ್ದೇನೆ. ಚುನಾವಣೆಯಲ್ಲಿ ಗೆದ್ದು ಪ್ರಧಾನಿಯಾಗಲು ನರೇಂದ್ರ ಮೋದಿಯವರಿಗೆ ಕೈ ಎತ್ತುತ್ತೇನೆ ಎಂದು ಹೇಳಿದರು.
ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ನಾನು, ಈವರೆಗೆ ಪಕ್ಷದ ಆದೇಶವನ್ನು ಎಂದೂ ಮೀರಿ ನಡೆದಿರಲಿಲ್ಲ. 2012 ರಲ್ಲಿ ಪಕ್ಷ ಹೇಳಿತು ಎಂದು ಮಂತ್ರಿ ಸ್ಥಾನ ಬಿಟ್ಟು ಪಕ್ಷ ಸಂಘಟನೆ ಮಾಡಿದ್ದೇನೆ. ಚುನಾವಣೆಗೆ ನಿಲ್ಲಬೇಡಿ ಎಂದಾಗ ಎರಡೇ ನಿಮಿಷದಲ್ಲಿ ಒಪ್ಪಿಗೆ ನೀಡಿದ್ದೆ. ಆದರೆ ಈ ಬಾರಿ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು ಎಂದರು.
ನನ್ನ ನಿರೀಕ್ಷೆ ಮೀರಿ ಜನರಿಂದ ಅದ್ಭುತ ಬೆಂಬಲ ಸಿಗುತ್ತಿದೆ. ನಮ್ಮ ನಡುವೆಯೇ ಬೆಳೆದಿರುವ ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ ಅವರ ಬೆಂಬಲ ಕೂಡ ಇದೆ ಎಂದೇ ಭಾವಿಸುತ್ತೇನೆ ಎಂದೂ ಹೇಳಿದರು. ತೀರ್ಥಹಳ್ಳಿ ಪಟ್ಟಣದ ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ಕೆ.ಎಸ್. ಈಶ್ವರಪ್ಪ ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಪ್ರಪಂಚದ ಯಾವುದೇ ಶಕ್ತಿ ಅಡ್ಡಿ ಮಾಡಿದರೂ ನರೇಂದ್ರ ಮೋದಿಯವರು ಪ್ರಧಾನಿಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ 27 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಶಿವಮೊಗ್ಗದಲ್ಲಿ ನನ್ನ ಗೆಲುವು ಖಚಿತ. ನನ್ನ ತೀರ್ಮಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.