ಬೆಂಗಳೂರು: ಸಹೋದರರು ಬಏನು ಸೇವೆ ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಅಣ್ಣ-ತಮ್ಮ ಇರುವುದು ರಾಮನಗರ ಜನರ ಸೇವೆ ಮಾಡಲು ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಬೆಂಗಳೂರಿನಲ್ಲಿ ಫ್ಲಾಟ್ ಪ್ಲಾನ್ ಮಂಜೂರಾತಿಗೆ ಪ್ರತೀ ಚದರ ಅಡಿಗೆ 100 ರು. ನಿಗದಿ ಮಾಡಿರುವುದು ಸೇವೆ ಅಲ್ಲವೇ? ಎಲ್ಲರಿಗೂ ಧಮ್ಕಿ ಹಾಕೋದು ಒಂದು ಸೇವೆ. ಅದನ್ನೆ ತಾನೇ ಮಾಡುತ್ತಿದ್ದಾರೆ ಎಂದು ಹೇಳಿದರು.
ನಾನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಕನಕಪುರ, ರಾಮನಗರ, ಚನ್ನಪಟ್ಟಣ, ಕುಣಿಗಲ್‌ನಲ್ಲಿ ಪ್ರವಾಸ ಮಾಡುವೆ. ತುಮಕೂರು, ಚಾಮರಾಜನಗರ, ಮೈಸೂರು ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ 14 ಕಡೆ ಪ್ರಚಾರ ನಡೆಸುತ್ತೇನೆ. ಕರಾವಳಿ ಬಿಟ್ಟು ಎಲ್ಲ ಕಡೆ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.
ಸೇವೆ ಮಾಡುತ್ತಿದ್ದಾರೋ ಅಥವಾ ರಾಜ್ಯವನ್ನು ಯಾವ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದಾರೋ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ನಾವು ನಿದ್ದೆ ಮಾಡೋಕೆ ಬಂದಿದ್ದೀವಾ? ಅವರು ಮಾತ್ರವಾ ಸೇವೆ ಮಾಡೋದಾ? ಪಂಚಾಯತಿ ಸದಸ್ಯರ ರೀತಿ ಕೆಲಸ ಮಾಡುತ್ತಾರಂತೆ. ಪಂಚಾಯತಿ ಸದಸ್ಯರು ಯಾಕೆ? ಇವರು ಅಲ್ಲಿ ಹೋಗಿ ಕೈ ಹಾಕಿದರೆ ಪಂಚಾಯತಿ ಸದಸ್ಯರು ಏನು ಮಾಡಬೇಕು ಎಂದು ತಿರುಗೇಟು ನೀಡಿದರು.