ಕೊಪ್ಪಳ: ಪ್ರಾಸಿಕ್ಯೂಶನ್ ಗವರ್ನರ್ ಅನುಮತಿ ಕೊಡುತ್ತಾರೆಂದು ಕುಮಾರಸ್ವಾಮಿ ಭಯಭೀತರಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಬಸಾಪೂರ ಏರ್ ಸ್ಟ್ರೀಪ್ ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಅರೆಸ್ಟ್ ಮಾಡುವ ಸನ್ನಿವೇಶ ಇಲ್ಲ. ಹಾಗೆ ಬಂದರೆ ಮುಲಾಜಿಲ್ಲದೆ ಅರೆಸ್ಟ್ ಮಾಡುತ್ತೇವೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕುಮಾರಸ್ವಾಮಿ ವಿರುದ್ಧ ತನಿಖೆ ಮಾಡಿ ಮತ್ತು ಸಾಕ್ಷಿ ಸಂಗ್ರಹಿಸಿ ಎಸ್ಐಟಿ ಲೋಕಾಯುಕ್ತರಿಗೆ ಕೊಟ್ಟಿದ್ದರು. ಆದರೆ, ಗವರ್ನರ್ ಏನು ಮಾಡಿದರು. ಯಾವುದೇ ತನಿಖೆ ಮಾಡದೇ ನನ್ನ ವಿರುದ್ಧ ಪ್ರಾಸಿಕ್ಯೂಶನ್ ಅನುಮತಿ ನೀಡಿದ್ದಾರೆ. ಇದು ತಾರತಮ್ಯ ಅಲ್ಲವೇ ? ಕುಮಾರಸ್ವಾಮಿ ಸುಳ್ಳು ಹೇಳಿ ಡಿಪೆಂಡ್ ಮಾಡುತ್ತಿದ್ದಾರೆ ಎಂದು ಹೇಳಿದರು.
ಪತ್ರ ಬಿಡುಗಡೆ ವಿಚಾರವಾಗಿ, ನನಗೆ ಗೊತ್ತಿಲ್ಲ. ಕುಮಾರಸ್ವಾಮಿ ಹಿಟ್ ಅಂಡ್ ರನ್ ಕೇಸ್. ಯಾವುದನ್ನು ನೇರವಾಗಿ ಎದುರಿಸಲ್ಲ. ಪೆಂಡ್ರೈವ್ ಜೇಬಲ್ಲೆ ಇದೆ. ಬಿಡುಗಡೆ ಮಾಡ್ತಿನಿ ಅಂದ್ರು ಮಾಡಿದರಾ ಎಂದು ವ್ಯಂಗ್ಯವಾಡಿದರು.
ಕೊಪ್ಪಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ವಿಚಾರವಾಗಿ, ನನಗೂ ಕೊಪ್ಪಳಕ್ಕೂ ಅವಿನಾಭಾವ ಸಂಬಂಧವಿದೆ. ಅಭಿವೃದ್ಧಿ ಕೆಲಸದ ಕುರಿತು ರಾಜಕೀಯ ಮಾಡಲ್ಲ. ಜನಪರವಾಗಿ ತೆಗೆದುಕೊಂಡ ನಿರ್ಧಾರ ಬದಲಾಗಲ್ಲ. ವಿಮಾನ ನಿಲ್ದಾಣ ಬಗ್ಗೆ ಕ್ರಮವಹಿಸಲಾಗುವುದು. ಹಾಗೂ ಹೆಸರು ಬೆಳೆ ಬೆಂಬಲ ಬೆಲೆ ಖರೀದಿ ಕೇಂದ್ರದ ವಿಚಾರವಾಗಿ, ಖರೀದಿ ಕೇಂದ್ರ ತೆರೆಯಲು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದರು.
ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ವಿರೋಧ ಪಕ್ಷದವರು ಟೀಕೆ ಮಾಡಿ ರಾಜಕೀಯ ಮಾಡುತ್ತಿದ್ದಾರೆ. ಇಡೀ ದೇಶವೇ ಗಮನಿಸುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ನಾರಾಯಣ ಇಂಜಿನಿಯರ್ಸ್, ಹಿಂದೂಸ್ತಾನ ಹಾಗೂ ಜಿಂದಾಲ್ ಇಂಜಿನೀಯರ್ಸ್ ಕಂಪನಿಯವರು ನಿದ್ದೆ ಮಾಡದೆ ಸಹಕಾರ ನೀಡಿದ್ದಕ್ಕೆ ಯಶಸ್ವಿ ಕಾರ್ಯವಾಗಿದೆ. ಜಲಾಶಯಕ್ಕೆ ಹಾಗೂ ಯಶಸ್ವಿ ಕಾರ್ಯಾಚರಣೆ ಮಾಡಿದವರಿಗೆಲ್ಲ ಗೌರವ ಅರ್ಪಿಸಬೇಕಿದೆ ಆ ಕಾರ್ಯ ಶೀಘ್ರ ಆಗಲಿದೆ. ಭದ್ರತೆ ಕುರಿತು ತಂತ್ರಜ್ಞರ ತಂಡ ಭೇಟಿನೀಡಲಿದೆ. ಟೀಕೆ ಸತ್ತೋಯ್ತು, ಕೆಲಸ ಉಳಿಯಿತು. ಪ್ರತಿವರ್ಷ ಅರ್ಧ ಟಿಎಂಸಿ ಹೂಳು ತುಂಬುತ್ತದೆ. ಅದಕ್ಕೆ ಪರ್ಯಾಯವಾಗಿ, ಡ್ಯಾಂ ಭದ್ರತೆ ಮತ್ತು ಆಯುಷ್ಯ ಹೆಚ್ಚಿಸಲು ವಿಚಾರವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಚಿವ ಎಂ.ಬಿ ಪಾಟೀಲ್, ಕಾಡಾ ಅಧ್ಯಕ್ಷ ಹಸನ್ ಸಾಬ ದೋಟಿಹಾಳ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪೂರ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಜಿ.ಪಂ ಮಾಜಿ ಸದಸ್ಯರಾದ ಎಸ್.ಬಿ ನಾಗರಳ್ಳಿ, ಗೂಳಪ್ಪ ಹಲಗೇರಿ, ಟಿ. ಜನಾರ್ದನ ಹುಲಗಿ ಸೇರಿ ಹಲವರಿದ್ದರು.