ಹಾಸನ: ಮುಂದಿನ ಒಂದು ವರ್ಷದಲ್ಲಿ ಕರ್ನಾಟಕ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ತಿಳಿಸಿದರು.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ದೇವರ ಇಚ್ಛೆಯಿಂದ ನಿಮ್ಮ ಸೇವೆ ಮಾಡಲು ನನಗೆ ಇನ್ನೊಂದು ಅವಕಾಶ ಸಿಗುತ್ತಿದ್ದು, ನಾನು ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ನಿಮ್ಮ ಆಶೀರ್ವಾದದಿಂದಲೇ ನನಗೆ ಮೂರನೇ ಜನ್ಮ ಸಿಕ್ಕಿದೆ. ಈ ಜನ್ಮದಲ್ಲಿ ಇನ್ನೊಂದು ವರ್ಷದೊಳಗೆ ನಿಮ್ಮ ಸೇವೆಗೆ ಅವಕಾಶ ಸಿಗಲಿದೆ ಎಂದರು.
ಕುಮಾರಸ್ವಾಮಿ ಮತ್ತೆ ಸಿಎಂ ಆಗುವ ಬಗ್ಗೆ ಮಾರ್ಮಿಕವಾಗಿ ಈ ರೀತಿ ಸುಳಿವು ನೀಡಿದ್ದಾರೆಯೇ ಎಂಬ ಗುಸುಗುಸು ಇದೀಗ ಆರಂಭವಾಗಿದ್ದು, 1.05 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಈ ಪೈಕಿ 58,000 ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ವ್ಯಯಿಸುತ್ತಿದ್ದಾರೆ. ರಾಜ್ಯದಲ್ಲಿ 6.87 ಲಕ್ಷ ಕೋಟಿ ಸಾಲವಿದೆ. ಅದನ್ನು ಮರುಪಾವತಿ ಮಾಡುವವರು ಯಾರು? ಇಂದು ಕಾಂಗ್ರೆಸ್ ಸರ್ಕಾರ ಇದೆ, ನಾಳೆ ಹೋಗುತ್ತಾರೆ. ಜನರು ಅದನ್ನು ಮರುಪಾವತಿಸಬೇಕಾಗುತ್ತದೆ ಎಂದು ವಿವರಿಸಿದರು.
ಆದಿಚುಂಚನಗಿರಿ ಮಠದ ವಿಚಾರವಾಗಿ ಕಾಂಗ್ರೆಸ್ ಮಾಡಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕೆಆರ್ ಪೇಟೆ ಕೃಷ್ಣ ಸೇರಿದಂತೆ ವಿಶ್ವ ಒಕ್ಕಲಿಗರ ಸಂಘದ ಅನೇಕರು ಬೇರೆ ಮಠಕ್ಕೆ ಹುಡುಕಾಟ ನಡೆಸಿದ್ದಾರೆ. ನಾನು ಬೆಂಬಲವನ್ನು ನೀಡಿದ್ದೇನೆ. ಇದು ತಪ್ಪೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಕ್ಕೆ ನಮಗೆ ಹೊಟ್ಟೆಕಿಚ್ಚು ಇಲ್ಲ. ಆದರೆ, ಈಗಿನ ಬೆಳವಣಿಗೆಗಳನ್ನು ನೋಡಿದರೆ ರಾಜ್ಯ ಎಲ್ಲಿಗೆ ಹೋಗುತ್ತದೋ ಎಂಬ ಆತಂಕ ಕಾಡುತ್ತಿದೆ. ಉಚಿತ ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಪಕ್ಷವೇನೂ ಅದರ ಹಣ ಖರ್ಚು ಮಾಡುತ್ತಿಲ್ಲ. ಬದಲಾಗಿ ಜನರ ಹಣದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸೂಚಿಸಿದರು