ವಿಜಯಪುರ
ಹಿರಿಯ ಪತ್ರಕರ್ತ ಶಿವಾನಂದ ತಗಡೂರ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ ಪತ್ರಕರ್ತರ ಸಮಸ್ಯೆ ಹಾಗೂ ಬೇಡಿಕೆಗಳಿಗೆ ಸದಾ ಸ್ಪಂದಿಸುತ್ತ ಯಶಸ್ವಿಯಾಗಿ ಸಂಘದ ಕಾರ್ಯಚಟುವಟಿಕೆಗಳನ್ನು ನಡೆಸುವ ಮೂಲಕ ಸಂಘದ ಘನತೆ ಹೆಚ್ಚಿಸಿದ್ದಾರೆ ಎಂದರೆ ತಪ್ಪಾಗಲಾರದು.
ಸಂಘದ ಏಳ್ಗೆ ಹಾಗೂ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮವಹಿಸುತ್ತಿರುವ ತಗಡೂರ ಅವರು, ಸಂಘದ ಎಲ್ಲ ಸದಸ್ಯರೊಂದಿಗೆ ತುಂಬಾ ಪ್ರೀತಿ-ವಿಶ್ವಾಸದಿಂದ ಮಾತನಾಡುತ್ತ ಎಲ್ಲರ ಹೃದಯ ಗೆದ್ದ ಮಾತೃ ಹೃದಯದ ವ್ಯಕ್ತಿ.
ರಾಜ್ಯಮಟ್ಟದ ಒಂದು ಪತ್ರಿಕೆಯ ಹಿರಿಯ ವರದಿಗಾರರಾಗಿ ತಮ್ಮ ಕರ್ತವ್ಯ ನಿರ್ವಹಿಸುವ ಜೊತೆಗೆ ರಾಜ್ಯದುದ್ದಗಲಕ್ಕೂ ದಣಿವಿಲ್ಲದೇ ಸಂಚರಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವನ್ನು ಒಂದು ಬಲಿಷ್ಠ ಸಂಘಟನೆಯನ್ನಾಗಿ ಮಾಡುವ ಜೊತೆಗೆ ಗಡಿಯಾಚೆಯ ಕೇರಳದ ಕಾಸರಗೋಡು ಹಾಗೂ ಮಹಾರಾಷ್ಟ್ರದ ಮುಂಬಯಿಯಲ್ಲೂ ಕೆಯುಡಬ್ಲ್ಯೂಜೆ ಘಟಕಗಳನ್ನು ರಚನೆ ಮಾಡಿ ಅಲ್ಲಿ ಸಂಘ ಸಕ್ರಿಯವಾಗಿರುವಂತೆ ಮಾಡಿರುವುದು ತಗಡೂರ ಅವರ ಹೆಗ್ಗಳಿಕೆ.
ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿರುವ ತಗಡೂರ ಅವರು, ಸರಕಾರದ ಮಟ್ಟದಲ್ಲಿ ತಮ್ಮ ಪ್ರಭಾವ ಬೀರಿ ಸಂಘದ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಜೊತೆಗೆ ಪತ್ರಕರ್ತರ ಸಂಕಷ್ಟಗಳಿಗೆ ಸರಕಾರ ಸ್ಪಂದಿಸುವಂತೆ ಮಾಡುವಲ್ಲಿ ಯಶಸ್ಸು ಕಂಡವರು.
ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ಹಲವಾರು ಜನ ಪತ್ರಕರ್ತರು ಪ್ರಾಣ ಕಳೆದುಕೊಂಡರು. ಆಗ ಮೃತ ಪತ್ರಕರ್ತರ ಕುಟುಂಬಗಳಿಗೆ ಸರಕಾರದಿಂದ ತಲಾ ಐದು ಲಕ್ಷ ರೂ. ಪರಿಹಾರ ಮಂಜೂರು ಮಾಡಿಸಿ ಅವರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಅವರ ಈ ಮಾನವೀಯ ಕಾರ್ಯವನ್ನು ಪತ್ರಕರ್ತರು ಎಂದೂ ಮರೆಯುವಂತಿಲ್ಲ.
ಕೋವಿಡ್ ಗೆ ಬಲಿಯಾದ ಸುಮಾರು ಐವತ್ತಕ್ಕೂ ಹೆಚ್ಚು ಪತ್ರಕರ್ತರ ಕುಟುಂಬಗಳಿಗೆ ಸರಕಾರದಿಂದ ಪರಿಹಾರ ಕೊಡಿಸಿದ ತಗಡೂರ ಅವರ ಬಗ್ಗೆ ರಾಜ್ಯಾದ್ಯಂತ ಪತ್ರಕರ್ತರ ವಲಯದಲ್ಲಿ ತುಂಬಾ ಪ್ರಶಂಸೆಯೂ ವ್ಯಕ್ತವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಅದೇ ರೀತಿ ಕೋವಿಡ್ ಸಂದರ್ಭದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತು ಏಜೆನ್ಸಿಗಳಿಂದ ನೀಡಲಾದ ಜಾಹೀರಾತುಗಳ ಪೆಂಡಿಗ್ ಬಿಲ್ಲ ಹಣವನ್ನು ತಗಡೂರ ಅವರು ಬಿಡುಗಡೆ ಮಾಡಿಸಿ ಅನುಕೂಲ ಮಾಡಿಕೊಟ್ಟಿರುವುದು ಅವರ ಕಾರ್ಯ ಕ್ಷಮತೆಗೆ ಹಿಡಿದ ಕೈಗನ್ನಡಿ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಹು ದಿನಗಳ ಬೇಡಿಕೆಯಾದ ಉಚಿತ ಬಸ್ ಜಾರಿಗಾಗಿ ಸತತ ಒತ್ತಡ ತಂದು ಸರಕಾರದ ಆದೇಶ ಹೊರಬೀಳುವಲ್ಲಿಯೂ ತಗಡೂರ ಅವರ ಪ್ರಯತ್ನ ಹಾಗೂ ಶ್ರಮ ಬಹಳಷ್ಟಿದೆ ಎಂದರೆ ಅತಿಶಯೋಕ್ತಿಯೇನಲ್ಲ.
ಸರಕಾರ ಇತ್ತೀಚಿಗಷ್ಟೆ ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ವಿತರಣೆಗಾಗಿ ರಾಜ್ಯಮಟ್ಟದ ಆಯ್ಕೆ ಸಮಿತಿಯನ್ನು ರಚನೆ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರೂ ಈ ಆಯ್ಕೆ ಸಮಿತಿಯ ಸದಸ್ಯರಾಗಿ ನೇಮಕಗೊಂಡಿರುವುದು ಒಂದು ವಿಶೇಷ.
ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಗಳನ್ನು ಬೇರೆ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಆಯೋಜಿಸುವುದರೊಂದಿಗೆ ಸಂಘದ ಕಾರ್ಯಚಟುವಟಿಕೆಗಳು ರಾಜ್ಯಾದ್ಯಂತ ವಿಸ್ತಾರವಾಗುವಂತೆ ವಿನೂತನ ಪ್ರಯೋಗ ಮಾಡಿದ ತಗಡೂರ ಅವರು, ಹಿರಿಯ ಪತ್ರಕರ್ತರಿಗೆ ಸಂಘದಿಂದ ಮನೆಯಂಗಳದಲ್ಲಿ ಗೌರವಿಸುವುದು, ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುವುದು, ಸಂವಾದ, ವಿಚಾರ ಸಂಕಿರಣ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಅವರು ಸಂಘದಿಂದ ವರ್ಷದುದ್ದಕ್ಕೂ ಯಶಸ್ವಿಯಾಗಿ ನಡೆಸಿದ್ದಾರೆ. ಇದು ಅವರ ಕ್ರಿಯಾಶೀಲತೆಗೆ ಸಾಕ್ಷಿ.
ಯಾವುದೇ ಕಾರ್ಯಕ್ರಮ ಸಂಘಟಿಸುವುದಿರಲಿ, ರಾಜ್ಯ ಸಮ್ಮೇಳನ ನಡೆಸುವುದಿರಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರೂ ಭಾಗವಹಿಸುವಂತೆ ಮಾಡುವುದು, ಕಾರ್ಯಕ್ರಮದ ಯಶಸ್ವಿಗಾಗಿ ಪತ್ರಕರ್ತರನ್ನು ಹುರಿದುಂಬಿಸಿ ಅವರಿಗೆ ಪ್ರೋತ್ಸಾಹ ನೀಡುವುದು ತಗಡೂರ ಅವರ ಒಂದು ವಿಶಿಷ್ಟ ಗುಣ. ಇದು ಅವರ ಸಂಘಟನಾತ್ಮಕ ಕಲೆಯೂ ಹೌದು. ಅಂತೆಯೇ ಅವರು ಸಂಘದ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುವಲ್ಲಿ ಸಫಲರಾಗಿದ್ದಾರೆ.
ಎರಡು ಅವಧಿಗೆ ಸಂಘದ
ರಾಜ್ಯಾಧ್ಯಕ್ಷರಾಗಿ ತಮ್ಮ ಅಧ್ಯಕ್ಷತೆಯಲ್ಲಿ ಪ್ರತೀ ವರ್ಷವೂ ಒಂದೊಂದು ಜಿಲ್ಲೆಯಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನವನ್ನು ಎಲ್ಲರ ಸಹಾಯ- ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸಿದ್ದಾರೆ. ಎಲ್ಲ ಸಮ್ಮೇಳನಗಳು ಒಂದಕ್ಕಿಂತ ಒಂದು ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ನಡೆದಿದ್ದು ಗಮನಾರ್ಹ. ಮೊದಲ ಮೂರು ವರ್ಷಗಳ ಅವಧಿಯಲ್ಲಿ ಮೈಸೂರು, ಮಂಗಳೂರು, ಕಲಬುರ್ಗಿ ಹಾಗೂ ಎರಡನೇ ಅವಧಿಯಲ್ಲಿ ಗುಮ್ಮಟನಗರಿ ವಿಜಯಪುರ, ಬೆಣ್ಣೆ ದೋಸೆ ಖ್ಯಾತಿಯ ದಾವಣಗೆರೆ ಜಿಲ್ಲೆಗಳಲ್ಲಿ ಹೀಗೆ ಐದು ಸಮ್ಮೇಳನಗಳು ಯಶಸ್ವಿಯಾಗಿ ಜರುಗಿವೆ. ಆರನೇ (39ನೇ ಪತ್ರಕರ್ತರ ರಾಜ್ಯ ಸಮ್ಮೇಳನ) ಸಮ್ಮೇಳನ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ 2025 ರ ಜನೇವರಿ 18 ಮತ್ತು 19 ರಂದು ಆಯೋಜಿಸಲಾಗಿದ್ದು, ಈ ಸಮ್ಮೇಳನವೂ ಅತ್ಯಂತ ಅರ್ಥಪೂರ್ಣವಾಗಿ ಹಾಗೂ ವೈಶಿಷ್ಠ್ಯಪೂರ್ಣವಾಗಿ ಜರುಗಿ ಯಶಸ್ವಿಯಾಗಲೆಂದು ನಾವೆಲ್ಲರೂ ಹಾರೈಸೋಣ.
-ದೇವೇಂದ್ರ ಹೆಳವರ
ರಾಜ್ಯ ಕಾರ್ಯಕಾರಿ ಸಮಿತಿ ಮಾಜಿ ಸದಸ್ಯರು, ಕೆಯುಡಬ್ಲ್ಯೂಜೆ, ವಿಜಯಪುರ