ಕೋಲಾರ: ಮನರೇಗಾ ಕಾಮಗಾರಿಗಳಲ್ಲಿ ತೊಡಗಿಕೊಂಡಂತಹ ಕೂಲಿಕಾರರಿಗೆ ಮೂರು ತಿಂಗಳಿಂದ ಕೂಲಿ ಹಣ ಬಂದಿಲ್ಲ. ಪರಿಣಾಮ, ಮನರೇಗಾ ಕಾಮಗಾರಿಗಳಲ್ಲಿ ಭಾಗಿಯಾಗಲು ಕೂಲಿಕಾರರು ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ರಾಜ್ಯದಾದ್ಯಂತ ಬರ ಪರಿಸ್ಥಿತಿಯಿದ್ದು, ರಾಜ್ಯ ಸರಕಾರ ಈಗಾಗಲೇ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಆ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿನ ಮಾನವ ದಿನಗಳ ಸೃಜನೆಯಾಗಿದೆ., ಸಮರ್ಪಕವಾಗಿ ಕೂಲಿ ಹಣ ಬರದ ಹಿನ್ನೆಲೆಯಲ್ಲಿ ಜನರು ಮನರೇಗಾ ಕಾಮಗಾರಿಗಳಿಂದ ದೂರ ಉಳಿಯುತ್ತಿದ್ದು, ಮನರೇಗಾ ಕಾಮಗಾರಿಗಳಲ್ಲಿ60:40 ಅನುಪಾತವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಅದರಂತೆ 100 ರೂಪಾಯಿಯಲ್ಲಿ ಶೇ.60 ರಷ್ಟು ಕೂಲಿಕಾರರಿಗೆ ಪಾವತಿಸಿದರೆ, ಶೇ.40 ರಷ್ಟನ್ನು ಸಾಮಗ್ರಿಗಳ ಖರೀದಿಗೆ ಬಳಸಬೇಕೆಂಬ ಕೇಂದ್ರ ಸರಕಾರದ ಆದೇಶವಿದೆ.
ಆದರೆ, ಈ ಬಾರಿ ರಾಜ್ಯದ ಒಟ್ಟಾರೆ ಅನುಪಾತವನ್ನು ಗಮನಿಸಿದಾಗ ಶೇ.68ರಷ್ಟನ್ನು ಕೂಲಿಕಾರರಿಗಾಗಿ ಹಾಗೂ ಶೇ.32ರಷ್ಟನ್ನು ಸಾಮಗ್ರಿ ಬಿಲ್‌ಗೆ ಮೀಸಲಿಟ್ಟಿರುವುದು ಉತ್ತಮ ಬೆಳವಣಿಗೆ. ಆದರೆ, ಮೂರು ತಿಂಗಳಿಂದ ಕೂಲಿಗಾರರಿಗೆ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರು ತೊಂದರೆ ಅನುಭವಿಸುವಂತಾಗಿದೆ.ರಾಜ್ಯದಾದ್ಯಂತ ಬರಗಾಲ ಇರುವುದರಿಂದ ಮನರೇಗಾ ಮಾನವ ದಿನಗಳ ಸಂಖ್ಯೆಯನ್ನು 100 ರಿಂದ 150ಕ್ಕೆ ಹೆಚ್ಚಿಸುವಂತೆ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಕೇಂದ್ರ ಸರಕಾರದಿಂದ ಮಾನವ ದಿನಗಳ ಹೆಚ್ಚಳ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಆದರೆ, ಎರಡೂವರೆ ತಿಂಗಳಿಂದ ಕೂಲಿ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಹಲವು ಜಿಲ್ಲೆಗಳ ಕೂಲಿಕಾರರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವ ಆತಂಕ ಶುರುವಾಗಿದೆ.
ಕೂಲಿಕಾರರಿಗೆ ಸಮರ್ಪಕವಾಗಿ ಕೂಲಿ ಬರದ ಹಿನ್ನೆಲೆಯಲ್ಲಿ ಜನರು ಮನರೇಗಾ ಕೆಲಸಗಳಿಂದ ದೂರ ಉಳಿಯುತ್ತಿದ್ದಾರೆ. ಇದರಿಂದಾಗಿ ರಾಜ್ಯಾದ್ಯಂತ ಪ್ರಗತಿಯಲ್ಲಿರುವ ಸಮುದಾಯ ಕಾಮಗಾರಿಗಳಿಗೆ ಕೂಲಿಕಾರರಿಲ್ಲದೆ ಮಂದಗತಿಯಲ್ಲಿ ಸಾಗುತ್ತಿದ್ದು, ಮೂರು ತಿಂಗಳು ಕಳೆದರೂ ಕೂಲಿ ಕೊಡದಿದ್ದರೆ ಕುಟುಂಬ ನಿರ್ವಹಣೆ ಮಾಡುವುದೇಗೆ ಎಂದು ಜನರು ಪ್ರಶ್ನಿಸುತ್ತಿರುವುದು ಬೆಳಕಿಗೆ ಬಂದಿದೆ.