ರಾಮನಗರ: ನೀತಿ ಸಂಹಿತೆ ಜಾರಿಯಾದ ದಿನದಿಂದ ಈ ವರೆಗೂ ಕೋಟಿಗಟ್ಟಲೇ ಹಣ, ಲೆಕ್ಕವಿಲ್ಲದಷ್ಟು ಉಡುಗೊರೆಗಳನ್ನು ಚುನಾವಣಾ ಆಯೋಗ ವಶ ಪಡಿಸಿಕೊಂಡಿದ್ದು, ಜನಪ್ರತಿನಿಧಿಗಳ ಮೇಲೂ ಪ್ರಕರಣ ದಾಖಲಿಸಿದ್ದು, ಚುನಾವಣೆ ಬಳಿಕ ಈ ಪ್ರಕರಣಗಳೆಲ್ಲವು ಏಕಾಏಕೀ ಬಿದ್ದುಹೋಗುತ್ತಿದ್ದು, ದಾಖಲಾಗಿರುವ ಪ್ರಕರಣಗಳಲ್ಲಿ ಯಾವೊಬ್ಬ ಜನಪ್ರತಿನಿಧಿಗಳಿಗೂ ಶಿಕ್ಷೆಯಾಗಿರುವ ಉದಾಹರಣೆಗಳೇ ರಾಜ್ಯದಲ್ಲಿಲ್ಲ.
ಕಳೆದ 16 ವಿಧಾನಸಭಾ ಚುನಾವಣೆಗಳು ಸೇರಿ, 17ಲೋಕಸಭಾ ಚುನಾವಣೆ, ವಿಧಾನ ಪರಿಷತ್ ಸದಸ್ಯರ ಚುನಾವಣೆ, ಗ್ರಾಪಂ, ತಾಪಂ, ಜಿಪಂ, ರಾಜ್ಯದಲ್ಲಿ ನಡೆದಿರುವ ಚುನಾವಣೆ ನಿಯಮ ಉಲ್ಲಂಘನೆ ಸಂಬಂಧ ಜನಪ್ರತಿನಿಧಿಗಳ ಮೇಲೆ ದಾಖಲಾಗಿರುವ ಪ್ರಕರಣಗಳಲ್ಲಿ ಯಾರೊಬ್ಬರಿಗೂ ಶಿಕ್ಷೆ ಇರಲಿ, ದಂಡ ಕಟ್ಟುವಂತೆ ನ್ಯಾಯಾಲಯ ಆದೇಶವನ್ನು ನೀಡಿಲ್ಲ.
ಚುನಾವಣಾ ಅಕ್ರಮಗಳು ಎಗ್ಗಿಲ್ಲದೇ ಸಾಗಿವೆ. ಕೋಮು ದ್ವೇಷ ಬಿತ್ತುವುದು, ಮತ ಕೇಂದ್ರದೊಳಗೆ ಮಾರಕ ವಸ್ತುಗಳನ್ನು ಕೊಂಡ್ಯೊಯುವ ಪ್ರಕರಣಗಳಿಗೆ ಮಾತ್ರ ಜಾಮೀನು ರಹಿತ ಕೇಸ್ ದಾಖಲಾಗಿದೆ. ಇನ್ನುಳಿದ ಎಲ್ಲಚುನಾವಾಣಾ ಅಕ್ರಮಗಳಿಗೆ ಜಾಮಿನು ಸಹಿತ ಕೇಸ್ ದಾಖಲಾಗಿದೆ. ಹೀಗಾಗಿ ಚುನಾವಾಣಾ ಆಯೋಗದ ಕಾಯ್ದೆಗಳೆಲ್ಲವು ಹಲ್ಲಿಲ್ಲದ ಹಾವಿನಂತಾಗಿದೆ.
ಹಿಂದೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ವ್ಯಕ್ತಿಯೊಬ್ಬರು ದಾಖಲಿಸಿದ್ದ ಪ್ರಕರಣ ನಾಲ್ಕುವರೆ ವರ್ಷಗಳ ಬಳಿಕ ಆದೇಶ ಹೊರ ಬಿದ್ದಿತ್ತು. ಅದಕ್ಕೂ ಸಹ ತಡೆಯಾಜ್ಞೆ ನೀಡಲಾಗಿತ್ತು.
ಮತದಾರರಿಗೆ ಹಂಚಲು ತಂದಿದ್ದ ಹಣ, ಉಡುಗೊರೆಗಳನ್ನು ವಶ ಪಡಿಸಿಕೊಳ್ಳುವ ಚುನಾವಣಾ ಆಯೋಗವು, ಕೋರ್ಟ್‌ಗೆ ವರದಿ ಸಲ್ಲಿಸಲಿದೆ. ವರ್ಷಾನುಗಟ್ಟಲೆ ಈ ವ್ಯಾಜ್ಯ ಕೋರ್ಟ್‌ನಲ್ಲಿ ನಡೆಯಲಿದೆ. ಇನ್ನು ಆಯೋಗದ ಪರವಾಗಿ ಸರಕಾರಿ ವಕೀಲರು ವಾದ ಮಂಡಿಸಬೇಕು. ಒಂದು ಕ್ಷೇತ್ರದಲ್ಲಿ ಸುಮಾರು 100 ಪ್ರಕರಣಗಳಿದ್ದರೆ ಎಲ್ಲ ಪ್ರಕರಣಗಳಿಗೂ ಒಬ್ಬರೆ ಸರಕಾರಿ ವಕೀಲರು ವಾದ ಮಾಡಿದರೆ, ಆರೋಪಿಗಳ ಪರ ವಕೀಲರ ದಂಡೆ ಇರುತ್ತದೆ.
ಕೇವಲ ಜಪ್ತಿ ಮಾಡಿದ ವಸ್ತುಗಳಷ್ಟೆ ಕೋರ್ಟ್‌ನಲ್ಲಿರುತ್ತವೆ. ಉಡುಗೊರೆಗಳನ್ನು ಪಡೆದುಕೊಂಡವರಲ್ಲಿ ಯಾರೊಬ್ಬರು ಕೋರ್ಟ್‌ನಲ್ಲಿ ಹೇಳಿಕೆ ನೀಡುವುದಿಲ್ಲ. ಇದರಿಂದ ಸಾಕ್ಷಿಗಳ ಕೊರತೆ ಎಂಬ ಕಾರಣಕ್ಕೆ ಇಡೀ ಪ್ರಕರಣ ವಜಾಗೊಳ್ಳಲಿದೆ ಎಂದು ಮಾಹಿತಿ ತಿಳಿದು ಬಂದಿದೆ.