ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಳೆ ರಾಜ್ಯ ಬಜೆಟ್ ಮಂಡಿಸಲಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗಿರುವ ನಿರೀಕ್ಷೆಗಳೇನು ಅಂತ ಕೇಳಿದಾಗ, ತಮ್ಮ ಇಲಾಖೆಯ ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯದ ಕೋಟ್ಯಾಂತರ ಮಹಿಳೆಯರಿಗೆ ಪ್ರಯೋಜನವಾಗಿ ಅವರ ಸಬಲೀಕರಣವಾಗುತ್ತಿದ್ದು, ಇಲಾಖೆಯಿಂದ ದೊಡ್ಡ ಬೇಡಿಕೆಯೇನೂ ಇಲ್ಲ ಎಂದು ಹೇಳಿದರು.
ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ ಕೇಳಿದ್ದೇವೆ ಮತ್ತು ಮುಖ್ಯವಾಗಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ನೀಡುವ ಗೌರವಧನ ಹೆಚ್ಚಿಸಲು ಬೇಡಿಕೆ ಸಲ್ಲಿಸಲಾಗಿದೆ ಎಂದು ಲಕ್ಷ್ಮಿ ತಿಳಿಸಿದರು.
ಅಂಗನವಾಡಿಗಳಿಗೆ ಬರುವ ಮಕ್ಕಳಿಗೆ ಸಮವಸ್ತ್ರದ ಜೊತೆ ಶೂ ನೀಡಬೇಕೆನ್ನುವ ಪ್ರಸ್ತಾಪ ಸಹ ಸಲ್ಲಿಸಿದ್ದೇವೆ ಎಂದು ಹೇಳಿದ ಅವರು ರಾಜ್ಯದ ಅಂಗನವಾಡಿ ಕೇಂದ್ರ ಸ್ಮಾರ್ಟ್ ಅಂಗನವಾಡಿ ಸಕ್ಷಮ ಅಂಗನವಾಡಿಯಾಗಿ ಪರಿವರ್ತಿಸುವ ಉದ್ದೇಶ ತಮಗಿದೆ ಎಂದರು.
ಬಿಜೆಪಿ ನಾಯಕರು ಮಾಡುತ್ತಿರುವ ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಕಾಂಗ್ರೆಸ್ ಸರ್ಕಾರಕ್ಕಿಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್, ಜನರಿಗೆ ನೀಡಿದ ಭರವಸೆ ಈಡೇರಿಸಿದ್ದೇವೆ ಎಂದು ಸೂಚಿಸಿದರು.