ನಿಮ್ಮ ಸುದ್ದಿ ಬಾಗಲಕೋಟೆ
ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ಹಾಗೂ ವಿವಿಧ ಇಲಾಖೆಗಳಲ್ಲಿನ ಸೌಲಭ್ಯಗಳನ್ನು ಪಡೆಯಲು ರೈತರ ಜಮೀನಿನ ವಿವರಗಳನ್ನು ಫ್ರುಟ್ಸ್ ತಂತ್ರಾಂಶದಲ್ಲಿ ದಾಖಲಿಸಲು ಜಿಲ್ಲೆಯಾದ್ಯಂತ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಈ ಕುರಿತು ವಿಡಿಯೋ ಕಾನ್ಪರೇನಸ್ ಮೂಲಕ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಫ್ರುಟ್ಸ್ ತಂತ್ರಾಂಶದಲ್ಲಿ ರೈತರು ತಮ್ಮ ಜಮೀನಿನ ವಿವರವನ್ನು ನೊಂದಾಯಿಸಿ ರೈತರ ಗುರುತಿನ ಚೀಟಿ ಸಂಖ್ಯೆ (ಎಫ್‍ಐಡಿ) ಪಡೆದುಕೊಳ್ಳುವುದು ಅವಶ್ಯವಾಗಿರುತ್ತದೆ.
ಎಫ್‍ಐಡಿ ಹೊಂದರೆ ಇರುವ ರೈತರು ಆಧಾರ ಕಾರ್ಡ, ಖಾತೆ ಉತಾರ, ಜಾತಿ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಪಾಸ್‍ಬುಕ್‍ಗಳನ್ನು ಪಡೆದುಕೊಂಡು ಎಫ್‍ಐಡಿ ಸಂಖ್ಯೆ ನೀಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ತಾಲೂಕಾ ತಹಶೀಲ್ದಾರರು ಗ್ರಾಮವಾರು ಜಮೀನುಗಳ ಮಾಹಿತಿಯ ಪಟ್ಟಿಯನ್ನು ಪಡೆದು ಸರ್ವೆನಂಬರಗಳನ್ನು ಫ್ರುಟ್ಸ್ ಪೋರ್ಟಲ್‍ನಲ್ಲಿ ಎಂಟ್ರಿ ಮಾಡಬೇಕು. ಖಾತೆ ಪ್ರಕಾರ ಸರ್ವೆ ನಂಬರಗಳು ಉಳಿದಿದ್ದರೆ ತಪ್ಪದೇ ತಂತ್ರಾಂಶದಲ್ಲಿ ದಾಖಲಿಸಲು ಸೂಚಿಸಿದರು.
ಈ ಕಾರ್ಯದಲ್ಲಿ ಅಧಿಕಾರಿಗಳು ಜಾಗರುಕತೆಯಿಂದ ಕೆಲಸ ನಿರ್ವಹಿಸಬೇಕು. ಯಾವುದೇ ಜಮೀನಿನ ಸರ್ವೇ ನಂಬರ ಬಿಟ್ಟು ಹೋಗದಂತೆ ಕ್ರಮಕೈಗೊಂಡು ಶೇ.100 ರಷ್ಟು ಕೆಲಸವಾಗಬೇಕು ಎಂದರು.
ಸಕಾಲದಲ್ಲಿ ಈ ಕಾರ್ಯ ಪೂರ್ಣಗೊಳಿಸಬೇಕಾಗಿರುವದರಿಂದ ಈ ಯೋಜನೆಯ ಸಂಪೂರ್ಣ ಅನುಷ್ಠಾನ ಹಾಗೂ ಮೇಲುಸ್ತುವಾರಿ ಮಾಡಲು ವಿವಿಧ ಹೋಬಳಿಗಳಿಗೆ ಜವಾಬ್ದಾರಿಯುತ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಆದೇಶಿಸಲಾಗಿದ್ದು, ತಮಗೆ ವಹಿಸಿದ ಜವಾಬ್ದಾರಿಯನ್ನು ಸೂಕ್ತವಾರಿ ನಿರ್ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು. ಗ್ರಾಮವಾರು ರೈತರ ಮಾಹಿತಿಯನ್ನು ಅಳವಡಿಸಲು ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಬೇಕು. ಪ್ರತಿದಿನದ ಪ್ರಗತಿ ವರದಿ ಸಲ್ಲಿಸಲು ತಿಳಿಸಿದರು.
ಯಾವುದೇ ಕಾರಣಕ್ಕೂ ಒಬ್ಬ ರೈತರ ಭೂದಾಖಲೆಗಳು ಇನ್ನೊಬ್ಬರಿಗೆ ಅಳವಡಿಸದಂತೆ ಕ್ರಮವಹಿಸಬೇಕು. ಮೊದಲ ಹಂತರದಲ್ಲಿ ಈಗಾಗಲೇ ನೋಂದಣಿಯಾಗಿರುವ ಗ್ರಾಮವಾರು ರೈತರ ಪಟ್ಟಿಯನ್ನು ಫ್ರುಟ್ಸ್ ಪೋರ್ಟನ್‍ನ ವಿವಿಧ ಇಲಾಖೆಗಳ ಲಾಗ್‍ಇನ್ ಮುಖಾಂತರ ಪಡೆದುಕೊಂಡು ರೈತರ ಎಫ್‍ಐಡಿಗೆ ಗ್ರಾಮ ಲೆಕ್ಕಾಧಿಕಾರಿಗಳು ಒದಗಿಸಿರುವ ರೈತರ ಖಾತೆ ಪುಸ್ತಕದಲ್ಲಿರುವ ಎಲ್ಲ ಸರ್ವೇ ನಂಬರಗಳನ್ನು ಅಳವಡಿಸಿ ಸೇರ್ಪಡೆ ಕಾರ್ಯ ಪೂರ್ಣಗೊಳಿಸಬೇಕು.
ಎರಡನೇ ಹಂತದಲ್ಲಿ ಫ್ರುಟ್ಸ್ ನಲ್ಲಿ ನೋಂದಣಿಯಾಗದಿರುವ ರೈತರ ಆಧಾರ ಹಾಗೂ ಬ್ಯಾಂಕ್ ವಿವರಗಳನ್ನು ಪಡೆದುಕೊಂಡು ಫ್ರುಟ್ಸ್ ಪೋರ್ಟಲ್‍ನ ತಂತ್ರಾಂಶದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಒದಗಿಸಿರುವ ರೈತರ ವಿವರದಂತೆ ಸರ್ವೆ ನಂಬರಗಳನ್ನು ಅಳವಡಿಸಲು ಸೂಚಿಸಿದರು.
ಸಭೆಯಲ್ಲಿ ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಯಶವಂತ ಗುರುಕಾರ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಳ್ಳೊಳ್ಳಿ, ಕೃಷಿ ಇಲಾಖೆಯ ಉಪನಿರ್ದೇಶಕ ಕೊಂಗವಾಡ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಹುಲ್‍ಕುಮಾರ ಬಾವಿರೆಡ್ಡಿ ಸೇರಿದಂತೆ ಆಯಾ ತಾಲೂಕಾ ತಹಶೀಲ್ದಾರ, ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.