ಬಾಗಲಕೋಟೆ: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮೂಲಕ ಚುನಾವಣಾ ರಣಕಹಳೆ ಊದಿದ ಕಾಂಗ್ರೆಸ್ ಮುಖಂಡರು ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಕಾರ್ಯಕರ್ತರ ಸಭೆ ಮೂಲಕ ಭಾನುವಾರ ವಿಧ್ಯುಕ್ತವಾಗಿ ಪ್ರಚಾರ ಆರಂಭ ಮಾಡಿದರು.
ಇಲ್ಲಿನ ಚರಂತಿಮಠ ಕಲ್ಯಾಣಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವರು, ಶಾಸಕರು ಹಾಗೂ ವಿವಿಧ ಮುಖಂಡರು, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ತರಬೇಕು. ಇಲ್ಲವಾದರೆ ಈಗಾಗಲೇ ಬಿಜೆಪಿ ಮುಖಂಡರು ಹೇಳಿಕೊಂಡಿರುವಂತೆ ಸಂವಿಧಾನ ತಿದ್ದುಪಡಿಗೆ ಕೈ ಹಾಕಲಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವಕ್ಕೂ ಉಳಿಗಾಲವಿಲ್ಲ ಎಂದು ಹೇಳಿದರು.
ಬಂಡವಾಳಶಾಹಿಗಳ ಪರವಾದ ಮೋದಿ ಸರ್ಕಾರದ ನೀತಿಗಳು ಹಾಗೂ ರಾಜ್ಯ ಸರ್ಕಾರದ ಬಡವರ ಪರವಾದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಟ್ಟರು. ಯಾವ ಕಾರಣಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟು ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರ ಗೆಲುವಿಗೆ ಶ್ರಮಿಸಿ ಎಂದು ಮನವಿ ಮಾಡಿದರು.
ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು, ಜವಾಹರಲಾಲ್ ನೆಹರೂ ಅವರಿಂದ ಆರಂಭಿಸಿ ಮನಮೋಹನ್ ಸಿಂಗ್ ಅವರತನಕ ಕಾಂಗ್ರೆಸ್ನ ಯಾವ ಯಾವ ಪ್ರಧಾನಿ ಈ ದೇಶಕ್ಕೆ ಏನೇನು ಕೊಡುಗೆ ನೀಡಿದ್ದಾರೆ ಎಂಬ ಪಟ್ಟಿಯನ್ನೇ ಕೊಡಬಹುದು. ಹಲವಾರು ಜನಪರ ಕಾರ್ಯಕ್ರಮಗಳನ್ನು ಕೊಟ್ಟರು. ಮನಮೋಹನ್ಸಿಂಗ್ ಅವರು ರೈತರ ಸಾಲ ಮನ್ನಾ ಮಾಡಿದರು. ಆದರೆ ನರೇಂದ್ರ ಮೋದಿ ಅವರು ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಿ ರೈತರ ಹಿತ ಬಲಿ ಕೊಟ್ಟರು ಎಂದು ಹೇಳಿದರು.
ನರೇಂದ್ರ ಮೋದಿ ಅವರು ಮಹಾನ್ ಸುಳ್ಳುಗಾರ. ಸ್ವಿಸ್ ಬ್ಯಾಂಕ್ನಲ್ಲಿರುವ ಕಪ್ಪು ಹಣ ಬರಲಿಲ್ಲ. ಭ್ರಷ್ಟಾಚಾರ ಮಿತಿಮೀರಿದೆ. ಚುನಾವಣಾ ಬಾಂಡ್ ಹಗರಣ ವಿಶ್ವದಲ್ಲೇ ಅತಿ ದೊಡ್ಡದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿಯೇ ಹೇಳಿದ್ದಾರೆ. ದೇಶ ಕಂಡ ದುರ್ಬಲ ಪ್ರಧಾನಿ ಮೋದಿ ಎಂದು ವಾಗ್ದಾಳಿ ಮಾಡಿದರು.
ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ಹಸಿವುಮುಕ್ತ ರಾಷ್ಟ್ರ ನಿರ್ಮಾಣದಲ್ಲಿ ಕಾಂಗ್ರೆಸ್ ಕೊಡುಗೆ ದೊಡ್ಡದು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನು ಮಾಡಿದೆ ಎಂದು ಪ್ರಶ್ನೆ ಮಾಡುವ ಪ್ರದಾನಿ ಮೋದಿ, ದೇಶದ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಕ್ಷೇತ್ರದಿಂದ ಆಯ್ಕೆಯಾಗಿರುವ ಸಂಸದರು ಒಳ್ಳೆಯವರೇ. ಆದರೆ ಸತತ 20 ವರ್ಷ ಸಂಸತ್ತಿಗೆ ಆಯ್ಕೆಯಾಗಿರುವ ಅವರು ಈ ಜಿಲ್ಲೆಗೆ ನೀಡಿರುವ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎಂಎಲ್ಸಿ ಸುನಿಲ್ ಗೌಡ ಪಾಟೀಲ, ರಕ್ಷಿತಾ ಈಟಿ, ಶ್ರೀಮಂತ ಬಸವಪ್ರಭು ಸರನಾಡಗೌಡ, ಸೌದಾಗಾರ್, ನಗರ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್ ಸೇರಿ ಹಲವರು ಮಾತನಾಡಿದರು.
ಶಾಸಕ ಎಚ್.ವೈ. ಮೇಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಬಿ.ಬಿ. ಚಿಮ್ಮನಕಟ್ಟಿ, ಸಿದ್ದು ಕೊಣ್ಣೂರ, ರವೀಂದ್ರ ಕಲಬುರ್ಗಿ, ಗಿರೀಶ್ ಅಂಕಲಗಿ, ಆರ್.ಎಸ್. ಭಂಡಾರಿ, ಎಸ್.ಎನ್. ರಾಂಪೂರ, ಮುರುಗೇಶ್ ಕಡ್ಲಿಮಟ್ಟಿ, ಚಂದ್ರಶೇಖರ ರಾಠೋಡ್ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿದ್ದರು.
ಪಕ್ಷಕ್ಕೆ ಹಾನಿ ಮಾಡಲ್ಲ
ನಾನೂ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಪಕ್ಷ ಸಂಯುಕ್ತ ಪಾಟೀಲ ಅವರ ಹೆಸರನ್ನು ಘೋಷಣೆ ಮಾಡಿದ ನಂತರ ಅನೇಕರು ನನಗೆ ಕರೆ ಮಾಡಿ ಸಭೆ ಕರೆಯಲು ಸಲಹೆ ಮಾಡಿದರು. ಪಕ್ಷದ ತೀರ್ಮಾನವೇ ಅಂತಿಮ. ಹೀಗಾಗಿ ನಾನು ಸಭೆ ಕರೆಯಲು ಹೋಗಲಿಲ್ಲ. ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರನ್ನು ಗೆಲ್ಲಿಸುವುದು ಈಗ ನಮ್ಮ ಮುಂದೆ ಇರುವ ಗುರಿ ಎಂದು ಅಜಯಕುಮಾರ ಸರನಾಯಕ ಹೇಳಿದರು.
ನೀರಾವರಿ ಮೊದಲ ಆದ್ಯತೆ
ನೀರಾವರಿ ಯೋಜನೆಗಳ ಅನುಷ್ಠಾನವೇ ನಮ್ಮ ಮೊದಲ ಆದ್ಯತೆ. ಕೃಷ್ಣಾ ನೀರಿನ ನಮ್ಮ ಹಕ್ಕನ್ನು ಪಡೆಯಲು ಸುಪ್ರೀಂ ಕೋರ್ಟ್ನಲ್ಲಿರುವ ಪ್ರಕರಣ ಇತ್ಯರ್ಥಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದ ಸಚಿವ ಶಿವಾನಂದ ಪಾಟೀಲ ಅವರು, ಸಂಸತ್ತಿಗೆ ಆಯ್ಕೆಯಾಗಿ ಹೋದ ನಂತರ ಮಾಡಬೇಕಾದ ಮೊದಲ ಕೆಲಸವೇ ಇದು ಎಂದು ವೇದಿಕೆಯಲ್ಲಿದ್ದ ಪುತ್ರಿ, ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರಿಗೆ ಹೇಳಿದರು.
ರಾಜಕಾರಣ ನಿಂತ ನೀರಲ್ಲ. ಬಾಗಲಕೋಟೆ ಮತ್ತು ವಿಜಯಪುರ ಅವಳಿ ಜಿಲ್ಲೆಗಳಲ್ಲಿ ಬದಲಾವಣೆಯ ಗಾಳಿ ಕಾಣಿಸುತ್ತಿದೆ. ಎರಡೂ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಅವಳಿ ಜಿಲ್ಲೆಗಳು ಕೇಂದ್ರದ ಯೋಜನೆಗಳಿಂದ ವಂಚಿತವಾಗಿವೆ. ರೈಲ್ವೆ ಯೋಜನೆಗಳು ಆಮೆ ವೇಗದಲ್ಲಿವೆ. ನೀರಾವರಿ ಸಮಸ್ಯೆ ಇದೆ. ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ ನಿರ್ಲಕ್ಷಿಸಲಾಗಿದೆ ಎಂದರು.
ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರಾಜ್ಯದ ಜನ ತತ್ತರಿಸಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಒಮ್ಮೆಯೂ ಕರ್ನಾಟಕಕ್ಕೆ ಬರಲಿಲ್ಲ. ಚುನಾವಣೆ ಸಮೀಪಿಸುತ್ತಿದ್ದತೆ ಮೇಲಿಂದ ಮೇಲೆ ಬರುತ್ತಿದ್ದಾರೆ. ಬರಗಾಲಕ್ಕೆ ಸ್ಪಂದಿಸಲಿಲ್ಲ. ರೈತರ ಸಾಲ ಮನ್ನಾ ಮಾಡಲಿಲ್ಲ. ಈ ಬಗ್ಗೆ ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರು ಒಮ್ಮೆಯೂ ಮಾತನಾಡಲಿಲ್ಲ ಎಂದು ಟೀಕಿಸಿದರು.
ನಿರೀಕ್ಷೆ ಹುಸಿ ಮಾಡಲ್ಲ
ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸಿದರೆ ನೀವು ನನ್ನ ಮೇಲೆ ಇಟ್ಟಿರುವ ನಿರೀಕ್ಷೆ ಹುಸಿಯಾಗದಂತೆ ಕೆಲಸ ಮಾಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಹೇಳಿದರು.
ದೇಶ ಸಂಕಷ್ಟದಲ್ಲಿದೆ. ರೈತರು ಸತತ ಎರಡು ಬರಗಾಲಕ್ಕೆ ತುತ್ತಾಗಿದ್ದಾರೆ. ಅನ್ನದಾತನ ಸಂಕಷ್ಟಕ್ಕೆ ನೆರವಾಗಲು ನೆರವು ಬಿಡುಗಡೆ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೆ ಸ್ಪಂದಿಸಲಿಲ್ಲ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಬೊಕ್ಕಸ ಬರಿದುಮಾಡಿಕೊಂಡಿದ್ದೀರಿ ಎಂದು ಟೀಕೆ ಮಾಡಿದರು. ನಮ್ಮ ಪಾಲಿನ ಹಣ ಕೇಳಿದರೆ ಸಬೂಬು ಹೇಳುತ್ತಲೇ ಬಂದರು ಎಂದು ವಾಗ್ದಾಳಿ ಮಾಡಿದರು.
ರೈತರು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಹೋರಾಟ ಆರಂಭಿಸಿ ದಿಲ್ಲಿಗೆ ಹೊರಟರೆ ತೊಂದರೆ ಕೊಟ್ಟರು. ಚಳವಳಿ ಹತ್ತಿಕ್ಕುವ ಪ್ರಯತ್ನ ಮಾಡಿದರು. ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕಕ್ಕೆ ನೆರವು ಬಿಡುಗಡೆ ಮಾಡಬೇಕು ಎಂಬ ಉದಾರತೆ ಇಲ್ಲ ಎಂದು ಟೀಕಿಸಿದರು.
ಕೋಟ್
ರಾಜ್ಯದಲ್ಲಿ ಭೀಕರ ಬರಗಾಲ ಇದ್ದಾಗ, ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾದಾಗ ಭೇಟಿ ನೀಡದ ಪ್ರಧಾನಿ ನರೇಂದ್ರ ಮೋದಿ ಅವರು, ಚುನಾವಣೆ ಸಮೀಪಿಸುತ್ತಿದ್ದಂತೆ ಪದೇಪದೆ ಕರ್ನಾಟಕಕ್ಕೆ ಬರುತ್ತಿದ್ದಾರೆ. ರಾಜ್ಯದ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ.
-ಶಿವಾನಂದ ಪಾಟೀಲ, ಸಚಿವ
ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ವಿದ್ಯಾವಂತೆ. ಅವರಲ್ಲಿ ಕೆಲಸ ಮಾಡುವ ಹುಮ್ಮಸ್ಸು ಇದೆ. ಹಿಂದಿ ಮತ್ತು ಇಂಗ್ಲೀಷ್ನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ಅವರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಿದರೆ ನಿಶ್ಚಿತವಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ.
-ಎಚ್.ವೈ. ಮೇಟಿ, ಶಾಸಕ