ಬಾಗಲಕೋಟೆ
ಓದುವ ವಯಸ್ಸಿನಲ್ಲಿಯೇ ಮಕ್ಕಳು ಶಿಕ್ಷೆಗೆ ಗುರಿಯಾಗುತ್ತಿದ್ದು, ಇದನ್ನು ತಪ್ಪಿಸಲು ಶಾಲಾ ಹಂತದಲ್ಲಿಯೇ ಕಾನೂನು ಅರಿವು ಮೂಡಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ ಮುಂದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯ ನೇರಳೆ ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಮಂಗಳವಾರ ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಪ್ರೌಢಶಾಲಾ ಮುಖ್ಯೋಪಾದ್ಯಾಯರಿಗೆ ಒಂದು ದಿನದ ಕಾನೂನು ಅರಿವು ನೆರವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರೌಢಶಾಲಾ ಹಂತದಲ್ಲಿ ಪೋಸ್ಕೋ ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಅಪರಾಧಕ್ಕೆ ಕಠಿಣಿ ಶಿಕ್ಷೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿದಲ್ಲಿ ಶಿಕ್ಷೆಗೆ ಒಳಗಾಗುವದನ್ನು ತಪ್ಪಿಸಬಹುದಾಗಿದೆ ಎಂದರು.
ಬೆಳೆಯುವ ವಯಸ್ಸಿನಲ್ಲಿ ಶಿಕ್ಷೆಗೆ ಗುರಿಯಾಗಿ ಹೊರಗೆ ಬರುವಷ್ಟಿಗೆ ವಿದ್ಯಾರ್ಥಿ ಜೀವನ ಮುಗಿದಿರುತ್ತದೆ. ಇದರಿಂದ ವಿದ್ಯಾರ್ಥಿ ಸಮಾಜದಲ್ಲಿ ಉತ್ತಮ ನಾಗರಿಕನಾಗಲು ಸಾಧ್ಯವಾಗುವದಿಲ್ಲ. ಅಲ್ಲದೇ ಬಾಲ್ಯವಿವಾಹ ನಿಷೇಧದ ಬಗ್ಗೆ ಶಾಲಾ ಹಂತದಲ್ಲಿ ಅರಿವು ಮೂಡಿಸಿದಲ್ಲಿ ಬಾಲ್ಯವಿವಾಹ ಆಗುವದನ್ನು ತಡೆಯಲು ಸಾಧ್ಯವೆಂದರು. ಮಾದಕ ವಸ್ತುಗಳಿಗೆ ಮಕ್ಕಳು ಬಲಿಯಾಗುವುದನ್ನು ತಡೆಯಬೇಕಿದೆ. ಈ ನಿಟ್ಟಿನಲ್ಲಿ ಶಾಲಾ ಮುಖ್ಯೋಪಾದ್ಯಾಯರ ಜವಾಬ್ದಾರಿ ಮುಖ್ಯವಾಗಿದ್ದು, ಕಾನೂನಿನ ಬಗ್ಗೆ ಅರಿವು ಮೂಡಿಸಲು ಮುಂದಾಗಿರುವುದಾಗಿ ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಶ್ರೀಶೈಲ ಹಾವರಗಿ ಮಾತನಾಡಿ ಶಾಲಾ ಹಂತದಲ್ಲಿಯೇ ಕಾನೂನು ಅರಿವು ಮೂಡಿಸಿದಲ್ಲಿ ಸಮಾಜದಲ್ಲಿ ವಿದ್ಯಾರ್ಥಿ ಉತ್ತಮ ನಾಗರಿಕನಾಗಲು ಸಾಧ್ಯ. ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ ಮಾತನಾಡಿ ಬದಲಾವಣೆಯ ಕಾಲಗಟ್ಟದಲ್ಲಿ ಮಕ್ಕಳಲ್ಲಿ ಕಾನೂನು ಅರಿವು ಮೂಡಿಸುವುದು ಅವಶ್ಯವಾಗಿದೆ. ಇದರಿಂದ ಪ್ರಾರಂಭದ ಹಂತದಲ್ಲಿಯೇ ತಪ್ಪುಗಳು ಆಗದಂತೆ ತಡೆಯಬಹುದಾಗಿದೆ ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಎಚ್.ಕೆ.ಗುಡೂರ ಮಕ್ಕಳ ಹಕ್ಕುಗಳ ಬಗ್ಗೆ, ಪಶುಪತಿ ಜಿಗಜಿನ್ನಿ ಮಕ್ಕಳಲ್ಲಿ ಮಾನಸಿಕ ಆರೋಗ್ಯ ಕುರಿತು ವಿವರವಾಗಿ ತಿಳಿಸಿಕೊಟ್ಟರು. ಕಾರ್ಯಾಗಾರದಲ್ಲಿ ಅನುದಾನ, ಅನುದಾನ ರಹಿತ ಶಾಲೆಗಳ ಮುಖ್ಯೋಪಾದ್ಯಾಯರು ಪಾಲ್ಗೊಂಡಿದ್ದರು. ಬಿ.ಎಂ.ಲಚ್ಚಾನ ವಂದಿಸಿದರು. ಪಿ.ಬಿ.ಪಾಟೀಲ ಕಾರ್ಯಕ್ರಮ ನಿರೂಪಿಸಿದರು.