ನಿಮ್ಮ ಸುದ್ದಿ ಬಾಗಲಕೋಟೆ
ಸ್ವಯಂ ಘೋಷಿತ ಆಸ್ತಿ ತೆರಿಗೆ ಬದಲಾಗಿ ಸರಳ ಆಸ್ತಿ ತೆರಿಗೆ ವ್ಯವಸ್ಥೆ ರೂಪಿಸಲು ಸರಕಾರ ಮುಂದಾಗಬೇಕು ಎಂದು ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಸರಕಾರವನ್ನು ಆಗ್ರಹಿಸಿದ್ದಾರೆ.
ನೂತನ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು ಬಲವಂತದಿAದ ಜನರ ಮೇಲೆ ಹೇರುತ್ತಿದೆ. ಇಂಥ ಸರ್ವಾಕಾರಿ ಧೋರಣೆ ಜನ ಒಪ್ಪುವುದಿಲ್ಲ. ಆರ್ಥಿಕ ತಜ್ಞರು, ಸಾರ್ವಜನಿಕರು, ಸಂಘ ಸಂಸ್ಥೆಗಳು, ವಾಣಿಜ್ಯೋದ್ಯಮ ಸಂಸ್ಥೆಗಳ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳದೇ ರೂಪಿಸಲಾಗಿರುವ ಈ ತೆರಿಗೆ ವ್ಯವಸ್ಥೆ ಕಾಯ್ದೆಯಾಗುವ ಮುನ್ನ ವಿಧಾನ ಮಂಡಲದಲ್ಲೂ ಚರ್ಚೆಗೆ ಒಳಪಡದೇ ಹೋಗಿದ್ದು ದುರಂತ ಎಂದಿದ್ದಾರೆ.
೨೦೨೧-೨೨ನೇ ಸಾಲಿಗೆ ಜಾರಿಗೊಳಿಸುತ್ತಿರುವ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಬಹಳ ಗೊಂದಲದಿಂದ ಕೂಡಿದ್ದು ಜನತೆಗೆ ಅತಿಯಾದ ಭಾರವಾಗಿದೆ. ಕೊರೊನಾ ಬಿಕ್ಕಟ್ಟಿನಲ್ಲಿಯೂ ೨೦೨೦-೨೧ನೇ ಸಾಲಿಗಾಗಿ ಆಸ್ತಿ ತೆರಿಗೆಯನ್ನು ಶೇ.೨೦ರಿಂದ ೩೦ರ ವರೆಗೆ ಹೆಚ್ಚಳ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಹೆಚ್ಚಳದ ಬರೆ ಬೀಳುತ್ತಿದೆ ಎಂದು ತಿಳಿಸಿದ್ದಾರೆ.
೨೦೦೫-೦೬ರಿಂದ ಜಾರಿಯಲ್ಲಿದ್ದ ವಿವಾದಾತ್ಮಕ ಆಸ್ತಿ ತೆರಿಗೆ ಪದ್ಧತಿ ಜನತೆಗೆ ಇಂದಿಗೂ ಅರ್ಥವಾಗಿಲ್ಲ. ಸದರಿ ವ್ಯವಸ್ಥೆ ಪ್ರಕಾರ ಪ್ರತಿ ೩ ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗುತ್ತಿತ್ತು. ಹೊಸ ಪದ್ಧತಿಯಲ್ಲಿ ಪ್ರತಿ ವರ್ಷವೂ ತೆರಿಗೆ ಹೆಚ್ಚಳವಾಗುತ್ತದೆ. ಇನ್ನು ಮುಂದೆ ತೆರಿಗೆ ಲೆಕ್ಕಾಚಾರಕ್ಕೆ ಪ್ರತಿ ವರ್ಷವೂ ಚಾಲ್ತಿ ವರ್ಷದ ಮಾರ್ಗಸೂಚಿ ದರ ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ ಸ್ಥಳೀಯ ಸಂಸ್ಥೆಗಳು ತೆರಿಗೆ ಲೆಕ್ಕಾಚಾರಕ್ಕೆ ನಾನಾ ಪ್ರದೇಶಗಳಿಗೆ ವಿವಿಧ ತೆರಿಗೆ ದರಗಳನ್ನು ನಿರ್ಧರಿಸಿಕೊಳ್ಳಬಹುದಾಗಿದೆ. ಇದು ಗೊಂದಲ ಮತ್ತು ಅರಾಜಕತೆಗೆ ಕಾರಣವಾಗಲಿದೆ.
ಸ್ವಯಂ ಘೋಷಿತ ಪದಕ್ಕೆ ಇಲ್ಲಿ ಅರ್ಥವೇ ಇಲ್ಲ. ಈ ಗೊಂದಲಗಳಿಗೆ ಕೊನೆ ಹೇಳಲು ಸರಕಾರ ಈಗಲಾದರೂ ಎಚ್ಚೆತ್ತುಕೊಂಡು ಜನ ಸ್ನೇಹಿ ಆಸ್ತಿ ತೆರಿಗೆ ಪದ್ಧತಿ ಜಾರಿಗೊಳಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ, ನಗರಾಭಿವೃದ್ಧಿ ಹಾಗೂ ಪೌರಾಡಳಿತ ಸಚಿವರು ಮತ್ತು ಇಲಾಖೆ ಹಿರಿಯ ಅಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.