ಸೆಲ್ಕೋ ಫೌಂಡೇಶನ್ ನಿಂದ ಸೋಲಾರ್ ಸೀತಲ ಘಟಕ
ನಿಮ್ಮ ಸುದ್ದಿ ಬಾಗಲಕೋಟೆ
ರೈತಾಪಿ ವರ್ಗದ ಜೀವನ ಶೈಲಿ ಬದಲಾಗಿ ಆರ್ಥಿಕ ಪ್ರಗತಿ ಹೊಂದಲು ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕನಿಷ್ಠ ೩ ತೋಟಗಾರಿಕೆ ರೈತ ಉತ್ಪಾದಕ ಕಂಪನಿಗಳು ಕ್ರೀಯಾಶೀಲವಾಗಿರುವಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿಯಲ್ಲಿನ ಹುನಗುಂದ ತೋಟಗಾರಿಕೆ ರೈತ ಉತ್ಪಾದಕ ಕಂಪನಿಯಲ್ಲಿ ಗುರುವಾರ ಸೆಲ್ಕೋ ಫೌಂಡೇಶನ್ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ೫ ಮೆಟ್ರಿಕ್ ಟನ್ ಸಾಮರ್ಥ್ಯದ ಸೋಲಾರ್ ಶೀತಲ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಹಳೆ ಪದ್ಧತಿಗೆ ಜೋತು ಬೀಳದೆ ಆಧುನಿಕ ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳಬೇಕು. ಆ ಮೂಲಕ ಆರ್ಥಿಕ ಸ್ಥಿತಿವಂತರಾಗಿ ಜೀವನ ಶೈಲಿ ಬದಲಾಯಿಸಿಕೊಳ್ಳಬೇಕು ಎಂದರು.
ನಬಾರ್ಡ್ ಸಹ ಹಳೆ ಪದ್ಧತಿಗೆ ಅಂಟಿಕೊಳ್ಳದೆ ಹೊಸ ಹೊಸ ವಿಧಾನಗಳನ್ನು ರೈತರಿಗೆ ಪರಿಚಯಿಸಬೇಕು. ಸೋಲಾರ್ ಘಟಕ ಅಳವಡಿಕೆ ಉತ್ತಮ ಹೆಜ್ಜೆ ಆಗಿದ್ದು ಬ್ಯಾಂಕ್ಗಳು ಹೊಲಿಗೆ ಯಂತ್ರ, ಹಾಲು ಕರೆಯುವ ಯಂತ್ರ, ಹೈನುಗಾರಿಕೆ, ಕುಲುಮೆ ನಿರ್ಮಾಣ ಸೇರಿದಂತೆ ಸಣ್ಣಪುಟ್ಟ ಯಂತ್ರೋಪಕರಣಗಳಿಗೆ ಸಹಾಯಧನ ನೀಡಲು ಸತಾಯಿಸದೆ ಗ್ರಾಮೀಣ ಪ್ರದೇಶದ ರೈತರ ಆರ್ಥಿಕ ಸ್ಥಿತಿಗತಿ ಉತ್ತಮಗೊಳ್ಳಲು ಸಹಕಾರ ನೀಡಬೇಕು. ರೈತರ ಬದುಕು, ಜೀವನ ಶೈಲಿ ಉತ್ತಮವಾದರೆ ನಾವೆಲ್ಲ ಸರಕಾರಿ ಉದ್ಯೋಗದಲ್ಲಿದ್ದಕ್ಕೆ ಸಾರ್ಥಕವೆನಿಸುತ್ತದೆ ಎಂದು ಹೇಳಿದರು.
ಸೆಲ್ಕೋ ಫೌಂಡೇಶನ್ ಡಿಜಿಎಂ ಪ್ರಸನ್ನ ಹೆಗಡೆ ಮಾತನಾಡಿ, ಕಳೆದ ೧೦ ವರ್ಷದಿಂದ ದೇಶ ಹಾಗೂ ಅಂತಾರಾಷ್ಟಿçÃಯ ಮಟ್ಟದಲ್ಲಿ ಸೌರಶಕ್ತಿ ಉಪಯೋಗಿಸಿಕೊಂಡು ಶಿಕ್ಷಣ, ಕೃಷಿ, ಹೈನುಗಾರಿಕೆ, ಆರೋಗ್ಯ ಸೇರಿದಂತೆ ಬಹುತೇಕ ಕ್ಷೇತ್ರದಲ್ಲಿ ಸೋಲಾರ್ ಉಪಯೋಗದ ಬಗ್ಗೆ ತಿಳಿಸಿದ್ದಲ್ಲದೆ ಕಾರ್ಯ ರೂಪಕ್ಕೂ ತರಲಾಗಿದೆ. ಬಾಗಲಕೋಟೆ ಜಿಲ್ಲೆಯನ್ನು ರಾಜ್ಯ ಹಾಗೂ ದೇಶದಲ್ಲೇ ಮಾದರಿ ಜಿಲ್ಲೆಯನ್ನಾಗಿ ಪರಿವರ್ತಿಸುವಲ್ಲಿ ಶ್ರಮಿಸುತ್ತಿದ್ದು ಅದಕ್ಕೆ ರೈತರ, ಸಂಪನ್ಮೂಲ ವ್ಯಕ್ತಿಗಳು, ಸರಕಾರಿ ಸಂಸ್ಥೆಗಳ ಸಹಕಾರ ಬೇಕು ಎಂದರು.
ಪ್ರಗತಿಪರ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ನಿಮ್ಮೊಂದಿಗೆ ಕೆಲಸ ಮಾಡಲು ಹೆಮ್ಮೆ ಎನಿಸುತ್ತದೆ. ಈ ಹಿಂದೆ ಸೋಲಾರ್ ಎಂದರೆ ಕೇವಲ ಬೀದಿದೀಪಕ್ಕೆ ಮಾತ್ರ ಎಂಬ ಶಬ್ದ ಕೇಳಿತ್ತು. ಆದರೆ ಅದೀಗ ಎಲ್ಲ ಕ್ಷೇತ್ರದಲ್ಲೂ ಉಪಯೋಗವಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದಲ್ಲಿ ೧,೫೦೦ ಅಧಿಕ ಶಾಲೆಗಳಿಗೆ ಸೋಲಾರ್ ಸೌಲಭ್ಯ ಫೌಂಡೇಶನ್ನಿಂದ ಒದಗಿಸಲಾಗಿದೆ. ಈ ಭಾಗದಲ್ಲಿ ರೈತರು ಬೆಳೆದ ತೊಗರಿ, ಜೋಳ, ಮೆಣಸಿನಕಾಯಿ ಸೇರಿದಂತೆ ಪ್ರಮುಖ ಉತ್ಪನ್ನಗಳನ್ನು ಆಧುನಿಕ ರೀತಿಯಲ್ಲಿ ಸಂಸ್ಕರಣೆ ಮಾಡಬಹುದಾಗಿದೆ. ಇದು ಆರಂಭವಷ್ಟೆ ಆಗಿದ್ದು ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸಲು ನಾನಾ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಗತಿಪರ ರೈತ ವಿ.ಜಿ.ಕೂಡಲಗಿಮಠ, ಜಿಲ್ಲಾಧಿಕಾರಿ ಪ್ರೋತ್ಸಾಹದೊಂದಿಗೆ ಸೂಳೇಬಾವಿಯ ಎಫ್ಪಿಒ ರಾಷ್ಟçಮಟ್ಟದಲ್ಲಿ ಹೆಸರು ಗಳಿಸಿದೆ. ಕೃಷಿ ಉತ್ಪನ್ನಗಳನ್ನು ಮೌಲ್ಯೀಕರಣ ಇಂದಿನ ಅಗತ್ಯತೆಗಳಲ್ಲೊಂದಾಗಿದೆ. ಮುಂದಿನ ದಿನದಲ್ಲಿ ರೈತರಿಗೆ ಯಂತ್ರೋಪಕರಣಗಳೇ ಜೀವಾಳವಾಗುತ್ತಿದ್ದು ಅದಕ್ಕೆ ತಕ್ಕಂತೆ ರೈತರ ಚಿಂತನೆ, ಜೀವನಶೈಲಿಯೂ ಬದಲಾವಣೆ ಹೊಂದಬೇಕಿದೆ ಎಂದರು.
ಕೃಷಿ ಉತ್ಪನ್ನ ಮೌಲ್ಯೀಕರಣಗೊಳಿಸಲು ಶೀತಲ ಘಟಕ ಅನುಕೂಲವಾಗಿದೆ. ಇಂತ ಶೀತಲ ಘಟಕ ಸ್ಥಾಪಿಸುವ ಮೂಲಕ ತಾಲೂಕಿನ ಅತ್ಯುತ್ತಮ ಎಫ್ಪಿಓ ಎಂದು ಪ್ರಸಂಶೆಗೆ ಪಾತ್ರವಾಗಿದೆ. ಇಂತಹ ಕ್ರಿಯಾಶೀಲ ಸಂಘಗಳು ಬೆಳೆಯಬೇಕಾದರೆ ಎಲ್ಡಿಎಂ, ನಬಾರ್ಡಗಳ ಸಹಕಾರ ಅಗತ್ಯವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹುನಗುಂದ ತೋಟಗಾರಿಕೆ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ರವಿ ಸಜ್ಜನ, ಸೆಲ್ಕೋ ಕಂಪನಿಯವರು ರಾಜ್ಯದಲ್ಲಿ ಒಟ್ಟು ೫ ಕಡೆ ಶೀತಲ ಘಟಕ ಸ್ಥಾಪನೆಗೆ ಮುಂದಾಗಿದ್ದು, ಅದರಲ್ಲಿ ಸೂಳೇಬಾವಿ ಗ್ರಾಮದಲ್ಲಿ ಸ್ಥಾಪಿಸಿರುವುದು ಮೊದಲನೆಯಾಗಿದೆ. ಈ ಭಾಗದ ರೈತರಿಗೆ ಅವಶ್ಯಕತೆ ಇರುವದನ್ನು ಗಮನಿಸಿ ಶೀತಲ ಘಟಕ ಸ್ಥಾಪಿಸಲಾಗಿದೆ. ಅಲ್ಲದೇ ಬೆಳೆಗಳಿಗೆ ಔಷಧ ಸಿಂಪಡಿಸುವ ಮಷಿನ್ ಸಹ ಸಂಘದಲ್ಲಿ ಇಡಲಾಗಿದ್ದು, ರೈತರು ಇದರ ಉಪಯೋಗ ಪಡೆದುಕೊಳ್ಳಲು ತಿಳಿಸಿದರು.
ತೋವಿವಿ ಸಂಶೋದನಾ ನಿರ್ದೇಶಕ ಡಾ.ಟಿ.ಬಿ.ಅಲ್ಲೋಳ್ಳಿ, ಇಂದಿನ ತಂತ್ರಜ್ಞಾನದಲ್ಲಿ ಸೌರಶಕ್ತಿಯ ಉಪಯೋಗ ಹೆಚ್ಚಿದ್ದು, ಪ್ರತಿ ರೈತರ ಮನೆ ಬಾಗಿಲಿಗೆ ಯೋಜನೆ ತಲುಪಬೇಕಿದೆ. ದೇಶದಲ್ಲಿ ಆಹಾರ ಉತ್ಪಾದನೆಗೆ ಕೊರತೆಯಿಲ್ಲ. ಆದರೆ ಅದನ್ನು ಸಂಸ್ಕರಣೆ ಮಾಡುವುದು ದೊಡ್ಡ ಸಮಸ್ಯೆ ಆಗಿದ್ದು ಇದನ್ನು ಸೋಲಾರ್ ಶೀತಲ ಪರಿಹಾರ ನೀಡಲಿದೆ. ಇದು ಆಹಾರ ಉತ್ಪಾದನೆ ಹಾಗೂ ಸಂಸ್ಕರಣೆಗೆ ಉಪಯೋಗವಾಗಲಿದೆ ಎಂದು ಹೇಳಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ತಹಸೀಲ್ದಾರ್ ಬಸವರಾಜ ನಾಯ್ಕೋಡಿ, ಉಪತಹಸೀಲ್ದಾರ್ ಎಂ.ಆರ್.ಹೆಬ್ಬಳ್ಳಿ, ಎಫ್ಪಿಒ ಅಧ್ಯಕ್ಷ ಗದಗಯ್ಯ ನಂಜಯ್ಯನಮಠ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಹುಲ್ಕುಮಾರ ಭಾವಿದೊಡ್ಡಿ, ಸಂತೋಷ ಇನಾಮದಾರ್ ಇತರರು ಇದ್ದರು.