ಮಹಾಶಿವರಾತ್ರಿಯ ಹಬ್ಬದ ದಿನ ಶಿವನನ್ನ ಮಾತ್ರವಲ್ಲದೆ ತಾಯಿ ಪಾರ್ವತಿ ದೇವಿಯನ್ನು ಕೂಡ ಪೂಜಿಸಲಾಗುತ್ತದೆ. ಮಹಾಶಿವರಾತ್ರಿಯ ದಿನವು ಶಿವನ ಭಕ್ತರಿಗೆ ಬಹಳ ವಿಶೇಷವಾಗಿದೆ. ಪ್ರತಿ ವರ್ಷ, ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿ ಉಪವಾಸ ಆಚರಣೆ ಮಾಡುವ ಪದ್ಧತಿ ರೂಢಿಯಲ್ಲಿದೆ. ಅದರಲ್ಲಿಯೂ ಮಾಸಿಕ ಶಿವರಾತ್ರಿಗಿಂತ ಮಹಾಶಿವರಾತ್ರಿಯನ್ನು ದೇಶಾದ್ಯಂತ ಹೆಚ್ಚು ವಿಜೃಂಭಣೆಯಿಂದ ಮತ್ತು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ವರ್ಷ ಮಹಾಶಿವರಾತ್ರಿಯನ್ನು ಮಾರ್ಚ್ 8 ರಂದು ಆಚರಣೆ ಮಾಡಲಾಗುತ್ತದೆ.
ಹಿಂದೂ ಧರ್ಮಗ್ರಂಥಗಳ ಪ್ರಕಾರ ಶಿವ ಪಾರ್ವತಿಯರ ವಿವಾಹವು ಈ ದಿನ ನಡೆದಿತ್ತು ಎನ್ನಲಾಗಿದ್ದು, ಅದರಲ್ಲಿಯೂ ಈ ಬಾರಿ ಅಂದರೆ 2024ರಲ್ಲಿ ಸರ್ವಾರ್ಥ ಸಿದ್ಧಿ ಯೋಗ ಇರುವುದರಿಂದ ಹೆಚ್ಚು ವಿಶೇಷ ಎನಿಸಿಕೊಂಡಿದೆ. ಹಾಗಾಗಿ ಈ ದಿನ ಆರ್ಥಿಕ ಲಾಭ ಮತ್ತು ಕಾರ್ಯ ಸಾಧನೆಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಅದಲ್ಲದೆ ವಿವಾಹಿತರಿಗೂ ಕೂಡ ಮಹಾಶಿವರಾತ್ರಿ ಬಹಳ ಮುಖ್ಯವೆಂದು ಹೇಳಲಾಗುತ್ತದೆ. ಕೆಲವರು ಮಹಾಶಿವರಾತ್ರಿಯನ್ನು ಶಿವನ ವಿವಾಹವದ ದಿನ ಎಂದು ಆಚರಿಸಿದರೆ, ಈ ದಿನದಂದು ಶಿವನು ತನ್ನ ಎಲ್ಲಾ ಶತ್ರುಗಳನ್ನು ಗೆದ್ದು ವಿಜಯ ಸಾಧಿಸಿದನು ಎಂದು ಕೆಲವರು ನಂಬುತ್ತಾರೆ.
ಫಾಲ್ಗುಣ ಮಾಸದ ಚತುರ್ದಶಿಯಂದು ಶಿವನು ದೈವಿಕ ಜ್ಯೋತಿರ್ಲಿಂಗದ ರೂಪದಲ್ಲಿ ಕಾಣಿಸಿಕೊಂಡನೆಂದು ಕೆಲವು ಕಥೆಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಮಹಾಶಿವರಾತ್ರಿಗೆ ಸಂಬಂಧಿಸಿದ ಕೆಲವು ಪೌರಾಣಿಕ ಕಥೆಗಳ ಬಗ್ಗೆ ಮಾಹಿತಿ ಇಲ್ಲಿದೆ.ಶಿವ ಪುರಾಣದ ಪ್ರಕಾರ, ಒಮ್ಮೆ ಸೃಷ್ಟಿಯ ಆರಂಭದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಶ್ರೇಷ್ಠತೆಯ ಬಗ್ಗೆ ಕಲಹ ಆರಂಭವಾಯಿತು. ಈ ವಿವಾದದ ಸಮಯದಲ್ಲಿ, ಬೆಂಕಿಯ ಜ್ವಾಲೆ ಕಾಣಿಸಿಕೊಂಡು, ಆದಿ ಮತ್ತು ಅಂತ್ಯವನ್ನು ತಿಳಿದಿರುವವರನ್ನು ಅತ್ಯುತ್ತಮ ಎಂದು ಕರೆಯಲಾಗುತ್ತದೆ ಎಂದು ಹೇಳಿತು.
ಆಗ ವಿಷ್ಣು ಮತ್ತು ಬ್ರಹ್ಮ ತಮ್ಮ ಸೋಲನ್ನು ಒಪ್ಪಿಕೊಂಡರು. ಆಗ ಶಿವನು ನೀವಿಬ್ಬರೂ ಅತ್ಯುತ್ತಮರು, ಆದರೆ ನಾನು ಆದಿ ಮತ್ತು ಅಂತ್ಯವನ್ನು ಮೀರಿದ್ದೇನೆ ಎಂದು ಹೇಳಿದನು. ಇದರ ನಂತರ, ವಿಷ್ಣು ಮತ್ತು ಬ್ರಹ್ಮ ಆ ಬೆಂಕಿಯ ಜ್ವಾಲೆಯನ್ನು ಪೂಜಿಸಿದರು ಬಳಿಕ ಇದು ಜ್ಯೋತಿರ್ಲಿಂಗವಾಗಿ ಮಾರ್ಪಟ್ಟಿತು. ಈ ಘಟನೆ ನಡೆದ ದಿನ ಫಾಲ್ಗುಣ ತಿಂಗಳ ಚತುರ್ದಶಿ ತಿಥಿ. ಆಗ ಶಿವನು ಈ ದಿನ ಯಾರು ಉಪವಾಸ ಮಾಡಿ ನನ್ನನ್ನು ಪೂಜಿಸುತ್ತಾರೋ, ಅವರ ಎಲ್ಲಾ ತೊಂದರೆಗಳಿಂದ ಮುಕ್ತಿ ಪಡೆಯುತ್ತಾರೆ. ಜೊತೆಗೆ ಅವರ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ಹೇಳಿದನು. ಅಂದಿನಿಂದ ಈ ದಿನವನ್ನು ಮಹಾಶಿವರಾತ್ರಿ ಎಂದು ಆಚರಿಸಲು ಪ್ರಾರಂಭಿಸಲಾಯಿತು.