ಬಾಗಲಕೊಟೆ
ಮೈಸೂರು ರಾಜ್ಯ ಏಕೀಕರಣವಾಗಿ 68 ವರ್ಷಗಳು ಕಳೆದಿವೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳಾಗಿದ್ದರೂ ಕನ್ನಡಿಗರಿಗೆ ಸಿಗಬೇಕಾದ ಅವಕಾಶ, ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ ಎಂದು ಸಾಹಿತಿ ಡಾ.ಸಿ.ಎಂ.ಜೋಶಿ ವಿಷಾದ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕಸಾಪ ಭವನದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಜಲ, ನೆಲ, ನಾಡು ನುಡಿಗಾಗಿ ನಮ್ಮ ಹಿರಿಯರು ಮಾಡಿದ ತ್ಯಾಗ ಬಲಿದಾನದ ಪ್ರತೀಕವೇ ಕನ್ನಡದ ಅಸ್ಮಿತೆ. ಅದನ್ನು ಕಾಪಾಡಿಕೊಂಡು ಬರುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಕರ್ನಾಟಕದಲ್ಲಿ ಕನ್ನಡ ಭಾಷೆ, ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರಕುತ್ತಿಲ್ಲ. ಅನ್ಯ ಭಾಷಿಗರಿಂದ ಕನ್ನಡಿಗರು ಅವಕಾಶ ವಂಚಿತರಾಗುತ್ತಿದ್ದಾರೆ. ಸರಕಾರ ಮಹಾಜನ ವರದಿ ಮತ್ತು ಡಾ.ಮಹಿಷಿ ವರದಿಗಳನ್ನು ಜಾರಿಗೆ ತರಬೇಕು. ಗೋಕಾಕ ಚಳುವಳಿಗಳಂತಹ ಚಳುವಳಿಗಳಿಗೆ ಅವಕಾಶ ನೀಡಬಾರದು. ಕನ್ನಡಿಗರಿಗೆ ಕರ್ನಾಟಕದಲ್ಲಿ ಸರ್ವಕ್ಷೇತ್ರಗಳಲ್ಲಿ ಅವಕಾಶ ಮತ್ತು ಮೀಸಲಾತಿ ಸಿಗುವಂತಾಗಲಿ ಎಂದು ಒತ್ತಾಯಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಡಾ.ಚಂದ್ರಶೇಖರ ಕಾಳನ್ನವರ, ಭಗವತಿ, ಗೀತಾ ದಾನಶೆಟ್ಟಿ, ವಿಜಯಶ್ರೀ ಮುರನಾಳ, ಬಸವರಾಜ, ಶಂಕರ ಹೂಲಿ, ಆರ್.ಸಿ.ಚಿತ್ತರಗಿ, ಈಶ್ವರ ವಜ್ರಮಟ್ಟಿಮಠ, ಅಶೋಕ ಇತರರಿದ್ದರು.