ಚಾಮರಾಜನಗರ: ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಸ್ಥಳೀಯರು ಹಾಗೂ ರೈತ ಸಂಘಟನೆಯ ಸದಸ್ಯರು ದಿಢೀರ್ ಚಳವಳಿ ನಡೆಸಿದರು ಎಂದು ಮಾಹಿತಿ ತಿಳಿದು ಬಂದಿದೆ.
ಮಹದೇಶ್ವರ ದೇವಸ್ಥಾನಕ್ಕೆ ವಾಹನಗಳು ಪ್ರವೇಶಿಸುವ ಮತ್ತು ಹೊರ ಹೋಗುವ ದಾರಿಯಲ್ಲಿ ಬಂದ್ ಮಾಡಲಾಯಿತು. ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಬಂದಿದ್ದು, ದಾರಿಯಲ್ಲೇ ಕಾದು ನಿಲ್ಲುವಂತಾಯಿತು.ಸುಮಾರು ಏಳುನೂರು ವರ್ಷಗಳಿಂದ ಮಾದಪ್ಪನ ಭಕ್ತರಾಗಿ, ಮಹದೇಶ್ವರರಿಗೆ ಬಿಲ್ವಪತ್ರೆ, ಹೂವು ಸೇರಿದಂತೆ ಪೂಜೆಗೆ ಬೇಕಾದುದನ್ನು ಕಾಡಿನ ಭಾಗದಿಂದ ತರುತ್ತಿರುವ ಬೇಡಗಂಪಣರು ಈ ಹೋರಾಟ ನಡೆಸಿದರು. ಮಹದೇಶ್ವರ ಬೆಟ್ಟಕ್ಕೆ ಲಕ್ಷಲಕ್ಷ ಜನರು ಭೇಟಿ ನೀಡುತ್ತಾರೆ.
ಹಣದ ಹರಿವೂ ಇದೆ. ಆದರೆ, ಮಾದಪ್ಪನನ್ನೇ ನಂಬಿರುವ ಬೇಡಗಂಪಣರಿಗೆ ಮೂಲಸೌಕರ್ಯವೇ ಇಲ್ಲ. ಕುಡಿಯಲು ನೀರು, ಆಸ್ಪತ್ರೆ ಹಾಗೂ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಇಲ್ಲದೆ ಪರಿತಪಿಸುವಂತಾಗಿದೆ.ಇಲ್ಲಿನ ಕಾಡು ಭಾಗದಿಂದ ಅನಾರೋಗ್ಯ ಪೀಡಿತರು ಹಾಗೂ ಗರ್ಭಿಣಿಯರನ್ನು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಸಾಗಿಸುವುದು ಸವಾಲಿನ ಕೆಲಸವಾಗಿದೆ. ಸೂಕ್ತ ವ್ಯವಸ್ಥೆ ಇಲ್ಲದೆ, ಡೋಲಿ ಕಟ್ಟಿಕೊಂಡು ಮೂರು ನಾಲ್ಕು ಜನರು ಅನಾರೋಗ್ಯ ಪೀಡಿತರನ್ನು ಹೊತ್ತೊಯ್ಯುವ ಸ್ಥಿತಿ ಇದೆ.
ಹಲವು ಸಲ ಗರ್ಭಿಣಿಯರು ಸಾಗುವ ದಾರಿಯಲ್ಲೇ ಮಗುವಿಗೆ ಜನ್ಮಕೊಟ್ಟಿರುವ ಉದಾಹರಣೆಗಳಿವೆ. ಇದನ್ನು ತಪ್ಪಿಸಬೇಕು ಹಾಗೂ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ವ್ಯವಸ್ಥೆ ಆಗಬೇಕೆಂದು ಹೋರಾಟಗಾರರು ಆಗ್ರಹಿಸಿದ್ದಾರೆ. ಮೂಲಸೌಕರ್ಯ ಸಿಗುವವರೆಗೂ ಮತದಾನ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ.ಮಹದೇಶ್ವರ ಬೆಟ್ಟದಲ್ಲಿ ದೇವಸ್ಥಾನದವರೆಗೂ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.