Lok Sabha Election 2024 ರಾಜ್ಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದು ಕುಳಿತಿರುವ ಬಿಜೆಪಿಯ ಎರಡನೇ ಪಟ್ಟಿ ಇಂದು ( ಮಾ 12) ಬಿಡುಗಡೆಯಾಗಲಿದೆ ಎನ್ನುವ ಮಾಹಿತಿಯಿದ್ದು,ರಾಜ್ಯದ 18 – 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರೂ ಇರಲಿದೆ ಎಂದು ಹೇಳಲಾಗುತ್ತಿದೆ.
ರಾಜ್ಯದ ಬಿಜೆಪಿ ನಾಯಕರ ಜೊತೆಗಿನ ಕೇಂದ್ರದ ವರಿಷ್ಠರ ಮಾತುಕತೆ ಮುಕ್ತಾಯಗೊಂಡಿದೆ. ರಾಜ್ಯದ ನಾಯಕರು ತಮ್ಮ ಶಿಫಾರಸನ್ನು ಮತ್ತು ಅದಕ್ಕೆ ಕಾರಣವಾಗಿರುವ ಅಂಶಗಳನ್ನು ಹೈಕಮಾಂಡ್ ಮುಂದಿಟ್ಟಿದ್ದು, ಯಾಕಾಗಿ ಹಾಲೀ ಕೆಲವು ಸಂಸದರಿಗೆ ಟಿಕೆಟ್ ಬೇಡ ಎನ್ನುವ ವಿಷಯವನ್ನೂ ಮನದಟ್ಟು ಮಾಡಿದ್ದಾರಂತೆ.ಕೆಲವೊಂದು ಆಭ್ಯರ್ಥಿಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ, ನಾವು ನಿರ್ಧರಿಸುತ್ತೇವೆ ಎಂದು ಬಿಜೆಪಿ ಹೈಕಮಾಂಡ್ ರಾಜ್ಯದ ನಾಯಕರಿಗೆ ಸೂಚಿಸಿದ್ದು, ಅಭ್ಯರ್ಥಿಗಳೆಂದರೆ ಉಡುಪಿ ಚಿಕ್ಕಮಗಳೂರು ಹಾಲೀ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಎಂದು ಹೇಳಲಾಗುತ್ತಿದೆ.
ಹಾಲೀ ಮೈಸೂರು ಸಂಸದರು ದಿಢೀರನೆ ಸೋಮವಾರ ರಾತ್ರಿ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿ, ಕೆಟ್ಟತನಕ್ಕೆ ಶಕ್ತಿಯಿದ್ದರೆ, ಆಶೀರ್ವಾದಕ್ಕೂ ಬೆಲೆ ಇರಬೇಕಲ್ಲವೇ ಎಂದು ಭಾವೋದ್ವೇಗಕ್ಕೆಒಳಗಾಗಿದ್ದು, ಎಲ್ಲರೂ ನನ್ನ ಬಗ್ಗೆ ತೋರಿಸುತ್ತಿರುವ ಪ್ರೀತಿಗೆ ನಾನು ಚಿರಖುಣಿ ಎಂದು ಹೇಳಿದ್ದು, ಪ್ರತಾಪ್ ಸಿಂಹ ಮಾತಿನ ಶೈಲಿ ವಿದಾಯದ ಭಾಷಣದಂತಿತ್ತು.ಉಡುಪಿ ಚಿಕ್ಕಮಗಳೂರಿನಲ್ಲಿ ಹಾಲೀ ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬಾರದು ಎಂದು ಸ್ಥಳೀಯ ಕಾರ್ಯಕರ್ತರು ಮತ್ತು ಮುಖಂಡರು ತೀವ್ರ ಹೋರಾಟವನ್ನು ನಡೆಸುತ್ತಿದ್ದಾರೆ.
ಇವರ ವಿರುದ್ದ ಗೋಬ್ಯಾಕ್, ಪತ್ರ ಚಳುವಳಿ, ವಾಟ್ಸಾಪ್ ಸ್ಟೇಟಸ್ ಮುಂತಾದ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಕ್ಷೇತ್ರದಲ್ಲಿ ಶೋಭಾ ಹೊರತಾಗಿ, ಸಿ.ಟಿ.ರವಿ, ಜೀವಿಜಯ ಮತ್ತು ಪ್ರಮೋದ್ ಮಧ್ವರಾಜ್ ಅವರ ಹೆಸರೂ ಕೇಳಿ ಬರುತ್ತಿದೆ.ಸ್ಥಳೀಯರ ವಿರೋಧದ ನಡುವೆಯೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಶ್ರೀರಕ್ಷೆ ಶೋಭಾ ಕರಂದ್ಲಾಜೆ ಅವರ ಮೇಲಿದೆ. ಉಡುಪಿ ಚಿಕ್ಕಮಗಳೂರಿನಲ್ಲಿ ಎದುರಾಗುತ್ತಿರುವ ವಿರೋಧವನ್ನು ಅವಲೋಕಿಸಿ, ಶೋಭಾಗೆ ಕ್ಷೇತ್ರ ಬದಲಾವಣೆ ಮಾಡುವ ಮಾತುಕತೆ ವರಿಷ್ಠರ ವಲಯದಲ್ಲಿ ನಡೆಯುತ್ತಿದೆ ಎಂದು ಹೇಳಲಾಗುತ್ತಿರುವುದು ಬೆಳಕಿಗೆ ಬಂದಿದೆ.