ಲಖನೌ: ಚಾರ್‌ಧಾಮ್ ಯಾತ್ರೆಯ ವೇಳೆ ಕ್ಷೇತ್ರಗಳ ಆವರಣದಲ್ಲಿ ವಿಡಿಯೋ ಚಿತ್ರೀಕರಣ ಹಾಗೂ ರೀಲ್ಸ್ ಮಾಡುವುದನ್ನು ಉತ್ತರಾಖಂಡ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ ಅಯೋಧ್ಯೆಯ ರಾಮಮಂದಿರದ ಆವರಣದಲ್ಲಿ ಮೊಬೈಲ್ ಬಳಕೆ ಮಾಡುವಂತಿಲ್ಲಎಂದು ದೇವಾಲಯದ ಆಡಳಿತ ಮಂಡಳಿ ಮತ್ತು ಟ್ರಸ್ಟ್ ಆದೇಶ ಹೊರಡಿಸಿದೆ.
ಜನಸಾಮಾನ್ಯರು ಮಾತ್ರವಲ್ಲದೆ ವಿಐಪಿಗಳೂ ಕೂಡ ದೇವಾಲಯದ ಆವರಣದಲ್ಲಿ ಮೊಬೈಲ್ ಫೋನ್ ಬಳಸುವಂತಿಲ್ಲಎಂದು ಸೂಚಿಸಲಾಗಿದೆ.
ದೇವರಿಗೆಗೆ ಮಾಲೆ, ಹೂವು, ತೆಂಗಿನಕಾಯಿ, ಪ್ರಸಾದ ಅಥವಾ ಇತರ ಯಾವುದೇ ನೈವೇದ್ಯವನ್ನು ತೆಗೆದುಕೊಂಡು ಹೋಗುವಂತಿಲ್ಲ. ದರ್ಶನದ ನಂತರ ಭಕ್ತರಿಗೆ ಪ್ರಸಾದ ನೀಡಲಾಗುತ್ತದೆ.
ರಾಮ ಮಂದಿರದಲ್ಲಿ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಗ್ಯಾಜೆಟ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಜೊತೆಗೆ ಚರ್ಮದ ಬೆಲ್ಟ್ ಮತ್ತು ತೊಗಲಿನ ಚೀಲಗಳನ್ನು ಒಯ್ಯುವುದನ್ನು ಸಹ ನಿಷೇಧಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಟ್ರಸ್ ಸದಸ್ಯರಾದ ಅನಿಲ್ ಮಿಶ್ರಾ, ” ಎಲ್ಲಾ ಭಕ್ತರು ಈ ನಿರ್ಧಾರವನ್ನು ಗೌರವಿಸಬೇಕು, ಮೊಬೈಲ್ ಫೋನ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಇಡಲು ಲಾಕರ್ ರೂಮ್ ಸೌಲಭ್ಯವಿದೆ. ಅದನ್ನು ಎಲ್ಲಾ ಭಕ್ತರು ಬಳಸಿಕೊಂಡು, ದೇವಾಲಯದಲ್ಲಿ ಶಿಸ್ತು ಹಾಗೂ ಸುವ್ಯವಸ್ಥೆ ಕಾಪಾಡಬೇಕು,” ಎಂದು ಮನವಿ ಮಾಡಿದರು.