ಬಾಗಲಕೋಟೆ
ಕುಡಿತದ ಚಟ ಬಿಡಿಸುವ ಕಾರ್ಯ ಪವಿತ್ರವಾಗಿದ್ದು ಸಾವಿನ ಮನೆಯ ಬಾಗಿಲು ತಟ್ಟುತ್ತಿರುವವರಿಗೆ ನವಜೀವನ ಕೊಡುವ ಕೆಲಸವಾಗಿದ್ದು ಎಲ್ಲರೂ ಕೈಜೋಡಿಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ನಾಗೇಶ ಹೇಳಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಪ್ರಭುಶಂಕರೇಶ್ವರ ಸಾಂಸ್ಕೃತಿಕ ಭವನದಲ್ಲಿ ಯೋಜನೆಯ ತಾಲೂಕು ಘಟಕದಿಂದ ಪಟ್ಟಣದಲ್ಲಿ ಏ.೨ರಿಂದ ಹಮ್ಮಿಕೊಳ್ಳಲು ಉದ್ದೇಶಿಸಿರುವ ಮಧ್ಯ ವರ್ಜನ ಶಿಬಿರದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸಕ್ತ ವರ್ಷದಲ್ಲಿ ಯೋಜನೆಯಿಂದ ೧೫೬ ಶಿಬಿರ ನಡೆಸಲಾಗಿದೆ. ಹೊಸ ಆರ್ಥಿಕ ವರ್ಷದಲ್ಲಿ ಅಮೀನಗಡದಲ್ಲಿ ನಡೆಯುವುದು ಮೊದಲ ಕಾರ್ಯಕ್ರಮವಾಗಿದ್ದು ಈಗಾಗಲೆ ಶಿಬಿರದ ಪ್ರಯೋಜನವನ್ನು ಸಾವಿರಾರು ಮಧ್ಯ ವ್ಯಸನಿಗಳು ಪಡೆದುಕೊಂಡು ಸಮಾಜದಲ್ಲಿ ಉತ್ತಮ ಬದುಕು ಸಾಗಿಸುತ್ತಿದ್ದಾರೆ ಎಂದರು.
ಒಂದು ವಾರ ನಡೆಯುವ ಶಿಬಿರದಲ್ಲಿ ಮಧ್ಯ ವ್ಯಸನಿಯ ಮನ ಪರಿವರ್ತನೆ ಮೂಲಕ ಕುಡಿತದ ಚಟ ಬಿಡಿಸುವ ಕಾರ್ಯ ಮಾಡಲಾಗುವುದು. ಶೇ.೮೦ರಷ್ಟು ಜನ ಶಿಬಿರದಿಂದ ಕುಡಿತದ ಚಟ ಬಿಟ್ಟಿದ್ದಾರೆ. ಜೀವನಕ್ಕೆ ಬೆಳಕು ಕೊಡುವ ಕಾರ್ಯಕ್ರಮ ಇದಾಗಿದ್ದು ಇದೊಂದು ಪವಿತ್ರ ಹಾಗೂ ಪುಣ್ಯದ ಕೆಲಸ. ಕುಡಿತದಿಂದ ಇಡೀ ಕುಟುಂಬವೇ ನಾಶವಾಗಿದ್ದು ನಮ್ಮ ಸುತ್ತಮುತ್ತಲು ನಡೆಯುತ್ತಲೇ ಇರುತ್ತವೆ. ಹೀಗಾಗಿ ಅಂತಹ ವ್ಯವಸ್ಥೆಯನ್ನು ತಡೆಗಟ್ಟುವುದು ಪ್ರತಿಯೊಬ್ಬರ ಕರ್ತವ್ಯ. ಎಲ್ಲರೂ ಕೈಜೋಡಿಸುವ ಮೂಲಕ ಉತ್ತಮ ಸಮಾಜ ಕಟ್ಟಲು ಮುಂದಗೋಣ ಎಂದು ಹೇಳಿದರು.
ಯೋಜನೆಯ ಜಿಲ್ಲಾ ನಿರ್ದೇಶಕ ಕೃಷ್ಣಾ.ಟಿ., ತಾಲೂಕು ಯೋಜನಾಕಾರಿ ಸಂತೋಷ, ವಲಯ ಮೇಲ್ವಿಚಾರಕಿ ಪವಿತ್ರಾ, ಪಪಂ ಸದಸ್ಯರಾದ ಸಂತೋಷ ಐಹೊಳ್ಳಿ, ಸುಜಾತಾ ತತ್ರಾಣಿ, ಶ್ರೀದೇವಿ ನಿಡಗುಂದಿ, ತುಕ್ಕಪ್ಪ ಲಮಾಣಿ, ಮಾಜಿ ಸದಸ್ಯ ಮನೋಹರ ರಕ್ಕಸಗಿ, ಗ್ರಾಪಂ ಮಾಜಿ ಅಧ್ಯಕ್ಷ ಮಹಾಂತಪ್ಪ ಭದ್ರಣ್ಣವರ, ಮುಖಂಡರಾದ ವಿಷ್ಣು ಗೌಡರ, ರೇಣುಕಾ ರಾಠೋಡ, ಬಸವರಾಜ ಬೇವಿನಮಟ್ಟಿ, ನಂದಪ್ಪ ಭದ್ರಶೆಟ್ಟಿ, ಡಿ.ಪಿ.ಅತ್ತಾರ, ಸಂಗಣ್ಣ ದೇಸಾಯಿ, ಶ್ರೀಧರ ನಿರಂಜನ ಸೇರಿದಂತೆ ಸುತ್ತಲಿನ ನಾನಾ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಇದ್ದರು.
ಇದೇ ಸಂದರ್ಭದಲ್ಲಿ ಶಿಬಿರದ ಯಶಸ್ವಿಗಾಗಿ ವ್ಯವಸ್ಥಾಪನಾ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರರಾಜೇAದ್ರ ಶ್ರೀ, ಅಧ್ಯಕ್ಷರಾಗಿ ನಿವೃತ್ತ ಉಪನ್ಯಾಸಕ ಅಶೋಕ ಚಿಕ್ಕಗಡೆ ಸೇರಿದಂತೆ ಸಮಿತಿಯನ್ನು ಆಯ್ಕೆ ಮಾಡಿ ಜವಾಬ್ದಾರಿ ಹಂಚಲಾಯಿತು.