ಬಾಗಲಕೋಟೆ
ದೇಶ ಪೊಲಿಯೋ ಮುಕ್ತವಾಗಿದ್ದರೂ ಭವಿಷ್ಯದ ಹಿತದೃಷ್ಠಿಯಿಂದ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪೊಲಿಯೋ ಲಸಿಕೆ ನೀಡಲಾಗುತ್ತಿದೆ. ಸರಕಾರದ ಈ ಸೌಲಭ್ಯವನ್ನು ಪಾಲಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಭಾನುವಾರ ನಗರದ ೫೦ ಹಾಸಿಗೆಗಳ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಂದೇ ಒಂದು ಮಗು ಪೊಲಿಯೋಗೆ ಗುರಿಯಾದರೆ ಆ ಮಗು ಜೀವನಪರ್ಯಂತ ಹೋರಾಡುವಂತಾಗುತ್ತದೆ. ಈ ಕುರಿತು ಎಲ್ಲರಿಗೂ ತಿಳಿವಳಿಕೆ ನೀಡಬೇಕು ಎಂದರು.
ಸರಕಾರವು ರೋಗಗಳು ಉಲ್ಬಣಿಸದಂತೆ ತೆಗೆದುಕೊಂಡ ಕ್ರಮಗಳಿಂದಲೇ ಇಂದು ದೇಶದಲ್ಲಿ ಮಲೇರಿಯಾ, ಟಿಬಿಗಳಂತಹ ರೋಗಗಳು ಕಡಿಮೆಯಾಗಿವೆ. ಮಾ.೬ರವರೆಗೆ ಹಮ್ಮಿಕೊಂಡಿರುವ ಪೊಲಿಯೋ ಲಸಿಕಾ ಅಭಿಯಾನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಜಿಲ್ಲಾ ಆರ್‌ಸಿಎಚ್ ಅಕಾರಿ ಡಾ.ಸುವರ್ಣ ಕುಲಕರ್ಣಿ ಮಾತನಾಡಿದರು. ಅಶೋಕ ನೀಲಮಣಿ, ಡಿಎಚ್‌ಒ ಡಾ.ರಾಜಕುಮಾರ ಯರಗಲ್, ಲಸಿಕಾ ಅಭಿಯಾನದ ನೋಡಲ್ ಅಕಾರಿ ಡಾ.ಎ.ಎನ್.ದೇಸಾಯಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಕಾರಿ ಡಾ.ಕುಸುಮಾ ಮಾಗಿ, ತಾಲೂಕು ವೈದ್ಯಾಕಾರಿ ಇತರರು ಇದ್ದರು.