ಮಂಡ್ಯ: ಪಾಂಡವಪುರ ಪಟ್ಟಣದ ಆರೋಗ್ಯ ಇಲಾಖೆಯ ಕ್ವಾರ್ಟರ್ಸ್ ನಲ್ಲಿ ನಡೆಯುತ್ತಿದ್ದ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಹಿನ್ನಲೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹೊರಗುತ್ತಿಗೆ ಆಧಾರದ ಮೇಲೆ ಜಿಎಸ್‌ವೈ ಕರ‍್ಯಕ್ರಮದಡಿ ವಾಹನ ಚಾಲಕನಾಗಿದ್ದ ಎಂ. ಆನಂದ್ ವಜಾಗೊಂಡ ನೌಕರ.
ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರಳಾಗಿ ಕೆಲಸ ಮಾಡುತ್ತಿದ್ದ ಅಶ್ವಿನಿ ಅವರನ್ನು ಕರ್ತವ್ಯದಿಂದ ವಜಾಗೊಂಡಿದ್ದಾರೆ. ಅವರು ಕೂಡ ಮತ್ತೊಂದು ಹೊರ ಗುತ್ತಿಗೆ ಏಜೆನ್ಸಿ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದರು. ಏಜೆನ್ಸಿಯವರೇ ಅವರನ್ನು ವಜಾಗೊಳಿಸಿದ್ದಾರೆ ಎಂದು ಡಿಎಚ್‌ಒ ಡಾ.ಕೆ.ಮೋಹನ್ “ವಿಜಯ ಕರ್ನಾಟಕ”ಕ್ಕೆ ತಿಳಿಸಿದರು.
ಆನಂದ್ ವಿರುದ್ಧ ಪ್ರಕರಣ ದಾಖಲಾಗಿ, ಈಗಾಗಲೇ ಪೊಲೀಸರಿಂದ ಬಂಧಿತರಾಗಿ ಅವರನ್ನು ವಜಾಗೊಳಿಸಲಾಗಿದೆ. ಅವರ ಜಾಗಕ್ಕೆ ಬದಲಿ ವಾಹನ ಚಾಲಕನನನ್ನು ನಿಯೋಜನೆ ಮಾಡಲಾಗುವುದು ಎಂದು ಹೊರಗುತ್ತಿಗೆ ಏಜೆನ್ಸಿ ಪಡೆದಿರುವ ಹಿಂದೂಸ್ತಾನ್ ಸೆಕ್ಯೂರಿಟಿ ಸರ್ವೀಸ್‌ನ ವ್ಯವಸ್ಥಾಪಕರು ಡಿಎಚ್‌ಒ ಡಾ.ಕೆ.ಮೋಹನ್ ಅವರಿಗೆ ಪತ್ರ ಬರೆದು ದೃಢಪಡಿಸಿದ್ದಾರೆ.
ಪಾಂಡವಪುರದ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಸಂಬಂಧ ಗುರುವಾರ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದು, ಬಂದಿತರ ಸಂಖ್ಯೆ 6ಕ್ಕೇರಿದೆ. ಹೆಣ್ಣು ಭ್ರೂಣ ಹತ್ಯೆಗೆ ಸಹಕರಿಸುತ್ತಿದ್ದ ಆರೋಪದ ಮೇಲೆ ಮಂಡ್ಯದ ಜಿಲ್ಲೆಯ ನವೀನ್ ಮತ್ತು ಮೈಸೂರಿನ ಕುಮಾರ್ ಎಂಬಾತನನ್ನು ಬಂಧಿತರು. ಇಬ್ಬರನ್ನು ಇಂದು ವಿಚಾರಣೆಗೆ ಒಳಪಡಿಸಲಾಗಿದ್ದು, ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರು ತಿಳಿಸಿದರು.