ಕಣ್ಣುಚ್ಚಿಕೊಂಡು ಕುಳಿತ ಸ್ಥಳೀಯ ಆಡಳಿತ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಿ ವಿವಾಹ ಕಾರ್ಯಕ್ರಮಗಳು ನಡೆಯುತ್ತಿದ್ದರೂ ತಡೆಯಬೇಕಾದ ಸ್ಥಳೀಯ ಆಡಳಿತ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಜತೆಗೆ ಸರಕಾರದ ನಿಯಮದಂತೆ ಕೋವಿಡ್ ತಡೆಯುವಲ್ಲಿ ಮುತುವರ್ಜಿ ವಹಿಸಬೇಕಾದ ಹಲವು ತಿಳಿವಳಿಕೆಯುಳ್ಳ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ವಿವಾಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಸ್ಥಳೀಯ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಗುರುವಾರ ಪಟ್ಟಣದಲ್ಲಿ ವಿವಾಹ ಕಾರ್ಯಕ್ರಮವೊಂದು ನಡೆದಿದ್ದು ಅದು ಸಹ ಸರಕಾರಿ ಅಧಿಕಾರಿಗಳು ಮನೆಯಲ್ಲಿರುವವರ ಕುಟುಂಬದಲ್ಲೇ ಈ ವಿವಾಹ ಕಾರ್ಯಕ್ರಮ ನಡೆದಿದೆ.
ಯಾರಾದರೂ ಬಂದು ನೋಡಿದರೆ ಕಾಣದಂತೆ ಈ ವಿವಾಹ ಕಾರ್ಯಕ್ರಮ ನಡೆದಿದ್ದು ಮಧ್ಯಾಹ್ನ ೧೦೦ಕ್ಕೂ ಹೆಚ್ಚು ಜನ ಮನೆಯಲ್ಲಿ ಸೇರಿದ್ದು ಕಂಡು ಬಂದಿತು.
ಸಣ್ಣ ಪುಟ್ಟ ಗ್ರಾಮಗಳಲ್ಲಿ ನಡೆಯುವ ವಿವಾಹ ಕಾರ್ಯಕ್ರಮಗಳು ದೊಡ್ಡ ದೊಡ್ಡ ಸುದ್ದಿಯಾಗುತ್ತವೆ. ಆದರೆ ತಿಳಿದವರೇ ಇರುವ ಪಟ್ಟಣ ಪ್ರದೇಶದಲ್ಲಿ ಮದುವೆ ಕಾರ್ಯಕ್ರಮ ನಡೆದರೂ ಎಲ್ಲರೂ ಕಂಡು ಕಾಣದಂತಿರುತ್ತಾರೆ.
ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರೂ ಕೊರೊನಾ ಜಾಗೃತಿ ಕುರಿತು ಮತ್ತೊಬ್ಬರಿಗೆ ತಿಳಿ ಹೇಳುವವರಾಗಿದ್ದರು. ಆದರೂ ಈ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಿ ಮದುವೆ ಕಾರ್ಯಕ್ರಮ ಮಾಡುವ ಔಚಿತ್ಯವೇನಾದರೂ ಇತ್ತು ಎಂಬುದು ಪ್ರಜ್ಞಾವಂತ ನಾಗರಿಕ ಮಾತಾಗಿದೆ.