ಬೆಂಗಳೂರು: ಪುತ್ರನಿಗೆ ಟಿಕೆಟ್ ಸಿಗದೆ ಇರುವುದು ಹಾಗೂ ರಾಜಕೀಯವಾಗಿ ನನಗೆ ಬಿಜೆಪಿಯಲ್ಲಿ ಅನ್ಯಾಯವಾಗಿದೆ ಎಂದು ಅಸಮಾಧಾನಗೊಂಡಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪಕ್ಷೇತರವಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ನನ್ನ ಬೆಂಬಲ ಇದೆ ಎಂದು ಸಚಿವ ಎಂಬಿ ಪಾಟೀಲ್ ಸೂಚಿಸಿದರು
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಪಕ್ಷೇತರವಾಗಿ ಶಿವಮೊಗ್ಗದಲ್ಲಿ ಸ್ಪರ್ಧಿಸುವ ಕೆ.ಎಸ್ ಈಶ್ವರಪ್ಪ ನಿರ್ಧಾರ ಬಹಳ ಒಳ್ಳೆಯದು. ಈಶ್ವರಪ್ಪ ನಿರ್ಧಾರಕ್ಕೆ ನಾವು ಬೆಂಬಲಸುತ್ತೇವೆ ಎಂದು ಹೇಳಿದರು.
ಈ ನಡುವೆ ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಆಗಮಿಸುತ್ತಿದ್ದು, ಪ್ರಧಾನಿ ಸಮಾವೇಶಕ್ಕೂ ಈಶ್ವರಪ್ಪ ಭಾಗಿಯಾಗದೆ ಇರಲು ನಿರ್ಧಾರ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅವರ ಮನವೋಲಿಕೆಯ ಪ್ರಯತ್ನಗಳು ನಡೆಯುತ್ತಿವೆ. ಆದರೆ ಈಶ್ವರಪ್ಪ ಅವರು ಯಾವುದಕ್ಕೂ ಸಮ್ಮತಿ ಸೂಚಿಸುತ್ತಿಲ್ಲ. ಬದಲಾಗಿ, ಶಿವಮೊಗ್ಗದಿಂದ ಸ್ಪರ್ಧಿಸಿಯೇ ಸಿದ್ದ ಎಂದು ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಎಂಬಿ ಪಾಟೀಲ್, ಮೋದಿ ಅಲೆ ಎಲೆಕ್ಟ್ರೋಲ್ ಬಾಂಡ್ ನಿಂದ ಪಂಕ್ಚರ್ ಆಗಿದೆ. ಅವರಿಗೆ ಈಗ ಯಾವ ನೈತಿಕತೆಯೂ ಇಲ್ಲ. ಐಟಿ ಇಡಿ ರೇಡ್ ಮಾಡಿ ಕಂಪನಿಗಳಿಂದ ಕಾಂಟ್ರಾಕ್ಟ್ ಮೂಲಕ ಹಣ ಪಡೆದುಕೊಂಡಿದ್ದೀರಿ. ಇದು ಇಲ್ಲಿಗೆ ನಿಲ್ಲುವುದಿಲ್ಲ, ಬಹಳ ಆಳವಾಗಿ ಹೋಗುತ್ತದೆ ಎಂದರು.
ಮೋದಿ ಇಮೇಜನ್ನು ಬಿಜೆಪಿಗರು ಪ್ರದರ್ಶನ ಮಾಡುತ್ತಾ ಇದ್ದರು. ಆದರೆ ಆ ಮುಖವಾಡ ಇದೀಗ ಕಳಚಿದೆ. ಜನರ ಮನಸ್ಸಿನಲ್ಲಿ ಇವೆಲ್ಲಾ ನೆನಪಿರಲಿದೆ. ನ್ಯಾಚುರಲ್ ಆಗಿ ಏನು ಹಣ ಸಂಗ್ರಹ ಮಾಡಬೇಕೋ ಅಷ್ಟನ್ನು ಮಾತ್ರ ಕಾಂಗ್ರೆಸ್ ಪಡೆದಿದೆ. ಎಲ್ಲರ ಹಣವನ್ನೂ ಮೊದಲು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.