ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆ ಮೀರಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಅಚ್ಚರಿಯ ಫಲಿತಾಂಶ ಬರುವುದು ನಿಶ್ಚಿತವಾಗಿದ್ದು, ಈ ಬಾರಿ ಬಿಜೆಪಿ ಸಿಂಗಲ್ ಡಿಜಿಟ್ ದಾಟುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.
ಹುಬ್ಬಳ್ಳಿ ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಕರ್ನಾಟಕದ ಪರವಾಗಿ ಕೆಲಸ ಮಾಡುವಂತಹ ಸಂಸದರು ನಮಗೆ ಬೇಕಾಗಿದೆ. ರಾಜ್ಯದಿಂದ ಆಯ್ಕೆಯಾಗಿದ್ದ ಬಹುತೇಕ ಬಿಜೆಪಿ ಸಂಸದರು ಕರ್ನಾಟಕವನ್ನೇ ಮರೆತಿದ್ದಾರೆ. ಅದರಲ್ಲೂ ಪ್ರಲ್ಹಾದ ಜೋಶಿ ಕೇಂದ್ರದಲ್ಲಿ ಸಚಿವರಾದ ಮೇಲೆ ಸಂಪೂರ್ಣ ರಾಜ್ಯವನ್ನು ಮರೆತಿದ್ದಾರೆ. ರಾಜ್ಯದ ಪರ ಕೇಂದ್ರದಲ್ಲಿ ಧ್ವನಿ ಎತ್ತಿ ಕರ್ನಾಟಕಕ್ಕೆ ನ್ಯಾಯ ಕೊಡಿಸುವಲ್ಲಿ ಜೋಶಿ ವಿಫಲರಾಗಿದ್ದಾರೆ ಎಂದು ದಿನೇಶ್ ಗುಂಡೂರಾವ್ ದೂರಿದರು.
ತಮ್ಮ ಆಡಳಿತದ ಸಾಧನೆ ಹಾಗೂ ಅಭಿವೃದ್ಧಿ ಪರ ವಿಷಯಗಳ ಬಗ್ಗೆ ಚರ್ಚಿಸದ ಬಿಜೆಪಿಯವರು, ಕೇವಲ ಸಮಾಜದಲ್ಲಿ ದ್ವೇಷ ಹಾಗೂ ಕೋಮುವಾದ ಬಿತ್ತುವ ಮೂಲಕ ಅಧಿಕಾರಕ್ಕೆ ಬರುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷವು ರಾಜ್ಯದ ಬಡವರು, ಮಹಿಳೆಯರು, ಮಧ್ಯಮ ವರ್ಗದ ಪರ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಜನ ಮನ್ನಣೆ ಪಡೆದಿದೆ. ಈ ಬಾರಿ ರಾಜ್ಯದಲ್ಲಿ 20ಕ್ಕೂ ಅಧಿಕ ಸೀಟುಗಳು ಕಾಂಗ್ರೆಸ್‌ಗೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿಯ ಚುನಾವಣೆ ಸತ್ಯ ಹಾಗೂ ಸುಳ್ಳು, ಪ್ರೀತಿ ಮತ್ತು ದ್ವೇಷದ ಮಧ್ಯೆ ನಡೆಯುತ್ತಿರುವ ಚುನಾವಣೆಯಾಗಿದೆ. ಕಳೆದ 10 ವರ್ಷದಲ್ಲಿ ಪ್ರಧಾನಿ ಮೋದಿಯವರ ಆಡಳಿತ ಹಾಗೂ ಅಭಿವೃದ್ಧಿ ಪರ ಯೋಜನೆಗಳು ಶೂನ್ಯವಾಗಿದ್ದು, ಸುಳ್ಳಿನ ಆಶ್ರಯದಲ್ಲಿ ಮೋದಿ ಚುನಾವಣೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.