ಮಡಿಕೇರಿ: ತಲಕಾವೇರಿ ಅಭಯಾರಣ್ಯದ ವಿರಾಜಪೇಟೆ ವಲಯದ ಮುಂಡ್ರೋಡು ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ಸಾವಿರಾರು ಮರಗಳನ್ನು ಕಡಿಯಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ತನಿಖೆಗೆ ಆದೇಶಿಸಿದರು.
ಕೊಡಗು ಜಿಲ್ಲೆಯ ಅರಣ್ಯ ಅಧಿಕಾರಿಗಳು ಮರ ಕಡಿದ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದರು. ಈ ವಿಚಾರವಾಗಿ ‘ಟಿವಿ9’ ವಿಸ್ತೃತ ವರದಿ ಮಾಡಿತ್ತು.
239 ಮರಗಳನ್ನು ಕಡಿದ ವಿಚಾರವಾಗಿ ಏಪ್ರಿಲ್ 30 ರಂದು ಮೂವರ ವಿರುದ್ಧ ಮುಂಡ್ರೋಟು ರೇಂಜ್ ಫಾರೆಸ್ಟ್ ಆಫೀಸರ್ ಪ್ರಕರಣ ದಾಖಲಿಸಿದ್ದರು. ಆದರೆ, ಕೊಡಗು ಏಕೀಕರಣ ರಂಗದ ಕಾರ್ಯಕರ್ತರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಈ ಪ್ರದೇಶದಲ್ಲಿ ಸಾವಿರಾರು ಮರಗಳನ್ನು ಕಡಿಯಲಾಗಿದೆ ಎಂದು ಆರೋಪಿಸಿದರು.
ಮರಹನನ ಕುರಿತು ಸಚಿವರ ಕಾರ್ಯಾಲಯಕ್ಕೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಸೂಚನೆ ನೀಡಿದ ಅವರು, ಎಪಿಸಿಸಿಎಫ್ ದರ್ಜೆಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಜತೆಗೆ, ಮರ ಕಡಿದ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಆದೇಶ ನೀಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.