ವಿಜಯಪುರ,
ಜಿಲ್ಲೆಯಲ್ಲಿ ಹಳ್ಳ ತುಂಬುವ ಯೋಜನೆಗಳ ಜೊತೆಯಲ್ಲಿಯೇ ಹಳ್ಳಗಳ ಪಕ್ಕದಲ್ಲಿ ನಾಲ್ಕೈದು ಕೋಟಿ ಗಿಡ ನೆಡುವ ಯೋಜನೆ ರೂಪಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಬಬಲೇಶ್ವರ ಪಟ್ಟಣದ ಹೊರವಲಯದಲ್ಲಿ ಇರಪಾನಗೋಳ ತೋಟದ ವಸ್ತಿ ಬಳಿ ಬಬಲೇಶ್ವರ-ಯಕ್ಕುಂಡಿ ಹಳ್ಳಕ್ಕೆ ಅಂದಾಜು ರೂ. 97.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ವಿಜಯಪುರ ಜಿಲ್ಲೆಯಲ್ಲಿ ಸುಮಾರು 160 ಹಳ್ಳಗಳಿಗೆ ಪ್ರತಿ 100 ಮೀ. ಗೊಂದರಂತೆ ಚೆಕ್ ಡ್ಯಾಂ ನಿರ್ಮಿಸಿ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಈ ಹಳ್ಳಗಳ ಎರಡೂ ಬದಿಗಳಲ್ಲಿ ಸುಮಾರು ನಾಲ್ಕೈದು ಕೋಟಿ ಗಿಡ ನೆಡಲಾಗುವುದು. ಇದರಿಂದ ಅಂತರ್ಜಲ ವೃದ್ಧಿ ಮಾತ್ರವಲ್ಲ, ಜಿಲ್ಲೆಯಲ್ಲಿ ಅರಣ್ಯ ಪ್ರದೇಶವೂ ಹೆಚ್ಚಾಗಲಿದೆ ಎಂದು ಅವರು ತಿಳಿಸಿದರು.
ಈ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಈ ಭಾಗದ ರೈತರ ಬೇಡಿಕೆ ಈಡೇರಿಸಲಾಗುತ್ತಿದೆ. ಈ ಕಾಮಗಾರಿಯ ಜೊತೆ ರಸ್ತೆಯನ್ನೂ ನಿರ್ಮಿಸಲಾಗುವುದು. ರೈತರ ಬೇಡಿಕೆಯಂತೆ ರಸ್ತೆ ಮತ್ತು ಹಳ್ಳದ ಪಾತ್ರ ಅತೀಕ್ರಮಣ ತೆರವಿಗೆ ಸಮೀಕ್ಷೆ ನಡೆಸಲಾಗುವುದು. ರೈತರು ಇದಕ್ಕೆ ಸಹಕರಿಸಬೇಕು. ಅಲ್ಲದೇ, ಈ ಬಾಂದಾರ ಹಳ್ಳದ ಹೂಳು ತೆಗೆಯಲಾಗುವುದು. ಹಳ್ಳದ ಪಾತ್ರ ಸ್ವಚ್ಛಗೊಳಿಸಿದರೆ ಒಂದು ಕಿ. ಮೀ. ವರೆಗೆ ನೀರು ಸಂಗ್ರಹವಾಗಲಿದೆ. ಈ ಬ್ಯಾರೇಜಿನಲ್ಲಿ ಏಳು ಅಡಿ ಎತ್ತರದವರೆಗೆ ನೀರು ಸಂಗ್ರಹವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತವಾಗಿವೆ. ಆದರೆ, ಗುರುಪಾದೇಶ್ವರ ಪುಣ್ಯ, ಶಾಂತವೀರ ಸ್ವಾಮೀಜಿ, ಸಿದ್ದೇಶ್ವರ ಸ್ವಾಮೀಜಿ ಮತ್ತು ಬಿ. ಎಂ. ಪಾಟೀಲ ಪುಣ್ಯದಿಂದ ನಾನು 2013-18ರ ಅವಧಿಯಲ್ಲಿ ಜಲಸಂಪನ್ಮೂಲ ಸಚಿವನಾಗಿ ನೀರಾವರಿ ಮಾಡಿದ್ದೇನೆ. 9 ಸ್ಥಾವರ ಮತ್ತು 1000 ಕಿ. ಮೀ. ಮುಖ್ಯ ಕಾಲುವೆ ಮಾಡಿದ್ದೇನೆ. ಇದರಿಂದಾಗಿ ಈ ಭೀಕರ ಬರದಲ್ಲಿಯೂ ಈ ಭಾಗದಲ್ಲಿ ನೀರಿನ ಸಮಸ್ಯೆ ಇಲ್ಲವಾಗಿದೆ. ನೀರಾವರಿಯಿಂದ ಭೂಮಿಯ ಬೆಲೆ ಹೆಚ್ಚಾಗಿದೆ. ಯಾರೂ ಭೂಮಿ ಮಾರಾಟ ಮಾಡಬೇಡಿ. ಮುಂದೆ ಭೂಮಿ ಸಿಗಲ್ಲ. ರೈತರು ಕೃಷಿ ಉತ್ಪನ್ನಗಳಿಂದ ಉತ್ತಮ ಲಾಭವಾಗುತ್ತಿದೆ ಎಂದು ವ್ಯಸನಗಳಿಗೆ ದಾಸರಾಗಬೇಡಿ ಎಂದು ಅವರು ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿ ಅರಣ್ಯ ಪ್ರದೇಶ 0.17% ಮಾತ್ರ ಇತ್ತು. ಕೋಟಿ ವೃಕ್ಷ ಅಭಿಯಾನದ ಬಳಿಕ ಅರಣ್ಯ ಪ್ರಮಾಣ ಹೆಚ್ಚಿದೆ. ನೀವೂ ಕೂಡ ಗಿಡ ಹಚ್ಚಿ ಮಳೆ ಬರಲು ನೆರವಾಗಿ. ಗ್ರಾಮೀಣ ಜನ ಮತ್ತು ರೈತರು ಸುಖವಾಗಿದ್ದರೆ ಎಲ್ಲವೂ ಸಮೃದ್ಧವಾಗಿರುತ್ತದೆ. ನೀರಿನ ಸದುಪಯೋಗ ಪಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದು ಎಂ. ಬಿ. ಪಾಟೀಲ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವನಾಥ ಪೀರಶೆಟ್ಟಿ, ಈ ಬ್ಯಾರೇಜು ನಿರ್ಮಾಣದಿಂದ 100 ಎಕರೆ ಜಮೀನಿಗೆ ನೇರವಾಗಿ ನೀರಾವರಿ ಸೌಲಭ್ಯ ಸಿಗಲಿದ್ದು, ಸಾವಿರಾರು ಕೊಳವೆ ಭಾವಿಗಳಿಗೆ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಅಷ್ಟೇ ಅಲ್ಲ, 500ಕ್ಕೂ ಹೆಚ್ಚು ತೋಟದ ವಸ್ತಿಗಳ ಜನರಿಗೆ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಜಿ. ಪಂ. ಮಾಜಿ ಅಧ್ಯಕ್ಷ ವಿ. ಎಸ್. ಪಾಟೀಲ, ಮುಖಂಡರಾದ ಬಿ. ಜಿ. ಬಿರಾದಾರ, ಶ್ರೀಶೈಲಗೌಡ ಪಾಟೀಲ ನಿಡೋಣಿ, ಶೇಖಪ್ಪ ಕೊಪ್ಪದ, ಧರ್ಮಣ್ಣ ಬಿಳೂರ, ಮಹೇಶ ಮಲ್ಲಣ್ಣವರ, ಈರಪ್ಪ ಭದ್ರಪ್ಪನವರ, ಕೆ. ಎಚ್. ಮುಂಬಾರೆಡ್ಡಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಗಂಗಾಬಾಯಿ ಕೋಟ್ಯಾಳ, ಸುಜಾತಾ ಜಂಗಮಶೆಟ್ಟಿ, ಮಹೇಶ ಮಾಳಿ, ನಿಂಗನಗೌಡ ಬಿರಾದಾರ, ಎಸ್. ಬಿ. ಶಿರೋಳ, ಸಿ. ಆರ್. ಕೋಟ್ಯಾಳ, ಎಂಜಿನಿಯರ್ ವಿಜಯ ವಸ್ತ್ರದ ಮುಂತಾದವರು ಉಪಸ್ಥಿತರಿದ್ದರು. ಆನಂದ ಬೂದಿಹಾಳ ವಂದಿಸಿದರು.
*1. ಸಚಿವ ಎಂ. ಬಿ. ಪಾಟೀ ಅವರಿಂದ ಬ್ರಿಡ್ಜ್ ಕಂ ಬಾಂದಾರ್ ಭೂಮಿಪೂಜೆ:* ಬಬಲೇಶ್ವರ ಪಟ್ಟಣದ ಹೊರವಲಯದಲ್ಲಿ ಇರಪಾನಗೋಳ ತೋಟದ ವಸ್ತಿ ಬಳಿ ಬಬಲೇಶ್ವರ-ಯಕ್ಕುಂಡಿ ನಿರ್ಮಿಸಲಾಗುತ್ತಿರುವ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗೆ ಸಚಿವ ಎಂ. ಬಿ. ಪಾಟೀಲ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ವಿ. ಎಸ್. ಪಾಟೀಲ, ಚನಬಸು ಕೋಟ್ಯಾಳ, ಮಲ್ಲು ಕಬ್ಬಿನ್, ದಾನಮ್ಮ ಜರಳಿ, ಶಾಂತಯ್ಯ ಕರೆಗೋಳ, ಗುರುಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
*2. ಸಚಿವ ಎಂ. ಬಿ. ಪಾಟೀ ಅವರಿಂದ ಬ್ರಿಡ್ಜ್ ಕಂ ಬಾಂದಾರ್ ಭೂಮಿಪೂಜೆ:* ಬಬಲೇಶ್ವರ ಪಟ್ಟಣದ ಹೊರವಲಯದಲ್ಲಿ ಇರಪಾನಗೋಳ ತೋಟದ ವಸ್ತಿ ಬಳಿ ಬಬಲೇಶ್ವರ-ಯಕ್ಕುಂಡಿ ಹಳ್ಳಕ್ಕೆ ನಿರ್ಮಿಸಲಾಗುತ್ತಿರುವ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಸಚಿವ ಎಂ. ಬಿ. ಪಾಟೀಲ ಅವರು ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಲ್ಲಪ್ಪ ಇರಪಾನಗೋಳ, ವಿ. ಎಸ್. ಪಾಟೀಲ, ಶೇಖಪ್ಪ ಕೊಪ್ಪದ, ಧರ್ಮಣ್ಣ ಬಿಳೂರ, ಬಿ. ಎಂ. ಕೋಟ್ಯಾಳ, ಶ್ರೀಶೈಲಗೌಡ ಪಾಟೀಲ ನಿಡೋಣಿ ಮುಂತಾದವರು ಉಪಸ್ಥಿತರಿದ್ದರು.
*3. ಸಚಿವ ಎಂ. ಬಿ. ಪಾಟೀ ಅವರಿಂದ ಬ್ರಿಡ್ಜ್ ಕಂ ಬಾಂದಾರ್ ಭೂಮಿಪೂಜೆ:* ಬಬಲೇಶ್ವರ ಪಟ್ಟಣದ ಹೊರವಲಯದಲ್ಲಿ ಇರಪಾನಗೋಳ ತೋಟದ ವಸ್ತಿ ಬಳಿ ಬಬಲೇಶ್ವರ-ಯಕ್ಕುಂಡಿ ಹಳ್ಳಕ್ಕೆ ನಿರ್ಮಿಸಲಾಗುತ್ತಿರುವ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗೆ ಸಚಿವ ಎಂ. ಬಿ. ಪಾಟೀಲ ಭೂಮಿಪೂಜೆ ನೆರವೇರಿಸಿದ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಮಲ್ಲಪ್ಪ ಇರಪಾನಗೋಳ, ವಿ. ಎಸ್. ಪಾಟೀಲ, ಶೇಖಪ್ಪ ಕೊಪ್ಪದ, ಧರ್ಮಣ್ಣ ಬಿಳೂರ, ಬಿ. ಎಂ. ಕೋಟ್ಯಾಳ, ಶ್ರೀಶೈಲಗೌಡ ಪಾಟೀಲ ನಿಡೋಣಿ ಮುಂತಾದವರು ಉಪಸ್ಥಿತರಿದ್ದರು.