ನಿಮ್ಮ ಸುದ್ದಿ ಬಾಗಲಕೋಟೆ
ಬಾದಾಮಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಾದಾಮಿ ತಾಲೂಕಿನ ಅಗಸನಕೊಪ್ಪಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಂದಾಜು 50 ಹೆಕ್ಟೇರ್ ಪ್ರದೇಶ ಹಾನಿಯಾಗಿದ್ದು, ಇದರಿಂದ ರೈತ ಬೆಳೆ ಹೆಸರು, ಸೂರ್ಯಕ್ರಾಂತಿ, ಮೆಕ್ಕೆಜೋಳ, ಉಳ್ಳಾಗಡ್ಡಿ ಬೆಳೆ ಹಾಳಾಗಿರುವದನ್ನು ಪರಿಶೀಲನೆ ನಡೆಸಿದರು. ಈಗಾಗಲೇ ಹೆಸರು ಬೆಳೆದ ರೈತ ಭರಮಪ್ಪ ನಾಗನ್ನವರಿಗೆ ಪರಿಹಾರ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಬಗ್ಗೆ ತಿಳಿಸಿದರು. ಉಳಿದ ಬೆಳೆ ಹಾನಿಗೆ ಶೀಘ್ರದಲ್ಲಿಯೇ ಪರಿಹಾರ ಒದಗಿಸುವ ಕಾರ್ಯ ಮಾಡಲಾಗುವುದೆಂದು ಸಚಿವರು ತಿಳಿಸಿದರು.
ಕೆರೂರಿನ ವಿಜಯಲಕ್ಷ್ಮೀ ಕೆರೂರ ರೈತರ ಸರ್ವೆ ನಂಬರ 73 ಜಮೀನಿಗೆ ಭೇಟಿ ನೀಡಿ ಹಾಳಾಗಿರುವ ಮೆನಸಿಣಕಾಯಿ ಬೆಳೆಯನ್ನು ವೀಕ್ಷಿಸಿದರು. ನಂತರ ಚೊಳಚಗುಡ್ಡ, ಹೆಬ್ಬಾಳ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿ ಉಂಟಾದ ಮನೆ, ಬೆಳೆ ಹಾನಿಗಳನ್ನು ಪರಿಶೀಲಿಸಿದರು. ಸಿ ವರ್ಗದ ಮನೆಗಳಿಗೆ ಶೀಘ್ರದಲ್ಲಿಯೇ ಪರಿಹಾರ ಒದಗಿಸುವಂತೆ ತಹಶೀಲ್ದಾರರಿಗೆ ಸೂಚಿಸಿದರು. ಉಳಿದ ಕೆಟಗರಿ ಮನೆಗಳಿಗೆ ಮೊದಲ ಕಂತಿನ ಹಣ ಜಮೆಗೆ ಕ್ರಮವಹಿಸಲು ಸೂಚಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಜಿಲ್ಲೆಯಲ್ಲಿ ಉಂಟಾದ ಹಾನಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ 20 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಹಾನಿಗೊಳಗಾದ ಮನೆಗಳಿಗೆ ತಕ್ಷಣ ಪರಿಹಾರಕ್ಕೆ 2 ಕ್ರಮಕೈಗೊಳ್ಳುವಂತೆ ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ. ಇದಲ್ಲದೇ ಹಾನಿಗೊಳದಾ ಕೃಷಿ, ತೋಟಗಾರಿಕೆ ಬೆಳೆ ಸಮೀಕ್ಷಯನ್ನು ಸಹ ಜಮೀನಿನಲ್ಲಿ ನೀರು ಕಡಿಮೆಯಾದ ತಕ್ಷಣ 10-12 ದಿನಗಳಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಮಳೆ ಹಾಗೂ ಪ್ರವಾಹದಿಂದ ಉಂಟಾದ ಬಾದಾಮಿ ತಾಲೂಕಿನ ಮಾಹಿತಿಯನ್ನು ಪಡೆದುಕೊಂಡರು. 26 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. 2 ಜಾನುವಾರುಗಳ ಜೀವನ ಹಾನಿಯಾಗಿದ್ದು, ಪ್ರವಾಹದಿಂದ ನೀರು ನುಗ್ಗಿದ 63 ಮನೆಗಳಲ್ಲಿರುವ ಗೃಹೋಪಯೋಗಿ ಮತ್ತು ಬಟ್ಟೆ ಬರೆ ಹಾನಿಗೆ ಒಟ್ಟು 6.30 ಲಕ್ಷ ರೂ.ಗಳ ಎಕ್ಸಗ್ರೇಸಿಯಾ ಹಣ ಪಾವತಿಸಲಾಗಿದೆ. 181 ಮನೆಗಳು, ಕೃಷಿ 18929 ಹೆಕ್ಟೇರ್, ತೋಟಗಾರಿಕೆ ಬೆಳೆ 3823 ಹೆಕ್ಟೇರ್ ಸೇರಿ ಒಟ್ಟು 22752 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿರುವುದಾಗಿ ಸಚಿವರಿಗೆ ತಿಳಿಸಿದರು.
ಭೇಟಿ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ತೋಟಗಾರಿಕೆ ಉಪನಿರ್ದೇಶಕ ರಾಹುಲ್‍ಕುಮಾರ ಬಾವಿದಡ್ಡಿ, ತಹಶೀಲ್ದಾರ ಜೆ.ಬಿ.ಮಜ್ಜಗಿ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕಲಾದಗಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.