ಚಿಂಚೋಳಿ: ರಾಜ್ಯದಲ್ಲಿ ಬಿಜೆಪಿ ಆಡಳಿತದ ಕಾಲದಲ್ಲಿ ತಾಂಡಾ ಅಭಿವೃದ್ಧಿ ನಿಗಮದಿಂದ ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ ಒಂದೇ ಒಂದು ಟ್ಯಾಕ್ಸಿ ಮಂಜೂರಿಗೊಳಿಸಿದೆ. ಆದರೆ, ಕಾಂಗ್ರೆಸ್ ಆಡಳಿತದಲ್ಲಿ ೪೦೦ ಟ್ಯಾಕ್ಸಿಗಳನ್ನು ಮಂಜೂರಿಗೊಳಿಸಲಾಗಿತ್ತು. ಅಲ್ಲದೇ ತಾಂಡಾ ಅಭಿವೃದ್ಧಿ ನಿಗಮಕ್ಕೆ ₹೨೫೦ ಕೋಟಿ ಅನುದಾನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ತಾಲೂಕಿನ ದೊಡ್ಡಕೊರವಿ ತಾಂಡಾದಲ್ಲಿ ಕಾಳಿಕಾದೇವಿ ೧೨ನೇ ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಲಂಬಾಣಿ ಜನಾಂಗದವರ ಕಲೆ, ಸಾಹಿತ್ಯ ನೀತಿ ಪರಂಪರಿಕೆಯನ್ನುಉಳಿಸುವುದಕ್ಕಾಗಿ ಸಂತ ಸೇವಾಲಾಲ್ ಮಹಾರಾಜರ ಹೆಸರಿನಲ್ಲಿ ಪ್ರಗತಿ ತಾಂಡಾ ಮಾಡಲಾಗಿದೆ. ಪ್ರತಿಯೊಂದು ತಾಂಡಾಕ್ಕೆ ಒಂದು ಕೋಟಿ ರು. ನೀಡಲಾಗಿತ್ತು. ಕಳೆದ ಬಿಜೆಪಿ ಸರ್ಕಾರದಲ್ಲಿ ತಾಂಡಾಗಳ ಅಭಿವೃದ್ಧಿಗೆ ಅನುದಾನವೇ ಕೊಡಲಿಲ್ಲ. ತಾಂಡಾದಲ್ಲಿ ಸೇವಾಲಾಲ್ ಸಾಂಸ್ಕೃತಿಕ ಕೇಂದ್ರ ಮತ್ತು ದೇವಸ್ಥಾನ ಬೆಳೆಸುವುದಕ್ಕಾಗಿ ೪೦೦ ದೇವಸ್ಥಾನಗಳನ್ನು ಮಂಜೂರಿಗೊಳಿಸಿ ಪ್ರತಿಯೊಂದು ದೇವಸ್ಥಾನಕ್ಕೆ ೨೫ ಲಕ್ಷ ಅನುದಾನ ನೀಡಲಾಗಿದೆ ಎಂದರು.
ಬಂಜಾರ ಸಮುದಾಯವನ್ನು ಮುಖ್ಯವಾಹಿನಿ ತರಲು ಸಾಕಷ್ಟು ಸೌಲಭ್ಯ ನೀಡಲಾಗಿದೆ. ಕಾಂಗ್ರೆಸ್ ಕೆಲಸ ಮಾಡುತ್ತದೆ ಬಿಜೆಪಿಯವರು ಹುಟ್ಟಿದ ಕೂಸಿಗೆ ಹೆಸರಿಡುತ್ತಾರೆ. ಕಾಂಗ್ರೆಸ್ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಆಚಾರ, ವಿಚಾರ ಇದೆ. ಆದರೆ ಪ್ರಚಾರ ಇಲ್ಲ. ಸುಭಾಷ ರಾಠೋಡ ಒಳ್ಳೆಯವನಾಗಿದ್ದರೂ ಚುನಾವಣೆಯಲ್ಲಿ ಗೆಲುವು ಸಾಧಿಸಲಿಲ್ಲ. ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನ ಸಿಗಲಿದೆ. ಜನರ ಆಶೀರ್ವಾದ ಇದ್ದರೆ ಮೇಲೆ ಬರುತ್ತಾರೆ ಜನರ ಆಶೀರ್ವಾದ ನಮ್ಮ ಮೇಲೆ ಇರಲಿ ಎಂದರು.
ಕಾಂಗ್ರೆಸ್ ಸರ್ಕಾರವು ನೀಡಿದ ಅನುದಾನ ಹಾಗೇ ಉಳಿದುಕೊಂಡಿತ್ತು. ಆಧುನಿಕ ಯುಗದಲ್ಲಿ ಬಂಜಾರ ಸಮುದಾಯದ ಕಲೆ, ಕಸೂತಿ ಉಳಿಸುವುದಕ್ಕಾಗಿ ಹುಮನಾಬಾದ ತಾಲೂಕಿನ ಲಾಲ್‌ಧರಿ ತಾಂಡಾದಲ್ಲಿ ೫೦ ಕೋಟಿ ನೀಡಲಾಗಿದೆ. ಸಂತ ಸೇವಾಲಾಲ್ ಮಹಾರಾಜರ ಜನ್ಮಸ್ಥಳ ಪುಣ್ಯಕ್ಷೇತ್ರದ ಅಭಿವೃದ್ಧಿಗೆ ೧೯೦ಕೋಟಿ ಅನುದಾನ ನೀಡಿದ್ದೇವೆ. ಆದರೆ, ಬಿಜೆಪಿ ಮಾಜಿ ಶಾಸಕ ಪಿ. ರಾಜೀವ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರೂ ಏನೂ ನೀಡಲಿಲ್ಲ ಇವೆಲ್ಲವೂ ಮಾಡುವಂತೆ ಯಾರೂ ನಮಗೆ ಅರ್ಜಿ ಕೊಟ್ಟಿರಲಿಲ್ಲ ಇವೆಲ್ಲವೂ ಮಂಜೂರಿ ಮಾಡಿ ಅನುದಾನ ನೀಡಿದ್ದರೂ ಬಿಜೆಪಿ ಸರ್ಕಾರದಲ್ಲಿ ಇವೆಲ್ಲವೂ ಯಾಕೆ ಮಾಡಲಿಲ್ಲವೆಂದು ಸೂಚಿಸಿದರು.