ಬೆಂಗಳೂರು/ಬಾಗಲಕೋಟೆ:
ರಾಜ್ಯದಲ್ಲಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬರಗಾಲ ಪೀಡಿತ ತಾಲೂಕುಗಳ ಘೋಷಣೆಯಾಗಿದ್ದು, ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಮುಧೋಳ ಸೇರಿದಂತೆ ಬಾಗಲಕೋಟೆಯ ತಾಲೂಕುಗಳು ಸೇರಿವೆ. ಈ ಹಿನ್ನೆಲೆಯಲ್ಲಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುವುದು ಬೇಡ ಎಂದು ಅಬಕಾರಿ ಮತ್ತು ಬಾಗಲಕೋಟೆ ಉಸ್ತುವಾರಿ ಸಚಿವರಾದ ಆರ್ ಬಿ ತಿಮ್ಮಾಪೂರ ಅವರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಬರ ಇರುವ ಹಿನ್ನೆಲೆಯಲ್ಲಿ ಜನ, ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಭ್ರಮಾಚರಣೆ ಸರಿಯಲ್ಲ. ಹಾಗಾಗಿ, ಸೆಪ್ಟೆಂಬರ್ 16 ರಂದು ಹುಟ್ಟುಹಬ್ಬದ ಅದ್ದೂರಿಯಾಗಿ ಆಚರಿಸಿಕೊಳ್ಳದಿರಲು ನಿರ್ಧರಿಸಲಾಗಿದೆ.
ಹುಟ್ಟುಹಬ್ಬದಂದು ಅದ್ದೂರಿಯಾಗಿ ಕೇಕ್ ಕಟಿಂಗ್, ಹೂವಿನ ಬೊಕ್ಕೆಗಳನ್ನು ನೀಡುವುದು ಸೇರಿದಂತೆ ಯಾವುದೇ ರೀತಿಯ ಸಂಭ್ರಮಾಚರಣೆಗಳು ಬೇಡ. ಕಾರ್ಯಕರ್ತರು, ಹಿತೈಷಿಗಳು, ಕ್ಷೇತ್ರದ ಆಶೀರ್ವಾದವೇ ಉಡುಗೊರೆ, ಅದುವೇ ಸಂಭ್ರಮ. ಉಳಿದಂತೆ ಯಾವುದೇ ರೀತಿಯ ಆಚರಣೆ ಬೇಡ. ಒಂದು ವೇಳೆ ಸ್ನೇಹಿತರು, ಕಾರ್ಯಕರ್ತರು ಅಭಿಮಾನಿಗಳು ಸೇರಿದಂತೆ ಹುಟ್ಟುಹಬ್ಬದ ಶುಭಕೋರುವವರು ಕೇವಲ ಪುಸ್ತಕಗಳನ್ನು ನೀಡಿದರೇ ಸಾಕು ಎಂದು ಸಚಿವ ಆರ್ ಬಿ ತಿಮ್ಮಾಪೂರ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.