ಗೋಕಾಕ: ಕಾರ್ಯಕರ್ತರ ಶ್ರಮದಿಂದ ಮಾತ್ರ ಅಭ್ಯರ್ಥಿಯ ಗೆಲುವು ಸಾಧ್ಯ. ತಾವೆಲ್ಲರೂ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ಗೋಕಾಕ ಮತ್ತು ಅರಭಾವಿ ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳ ಬಗ್ಗೆ ಕಾರ್ಯಕರ್ತರು ಮನೆ ಮನೆ ತೆರಳಿ ಮತದಾರರಿಗೆ ತಲುಪಿಸಿ. ದೇಶಕ್ಕೆ ಹೆಚ್ಚು ನೀರಾವರಿ ಸೌಲಭ್ಯ ಕಲ್ಪಿಸಿದ ಪಕ್ಷ ಕಾಂಗ್ರೆಸ ಎಂದರು.
ಪಕ್ಷದ ಕೆಲಸಕ್ಕೆ ಪಕ್ಷನಿಷ್ಠರಾಗಿ ಕಾರ್ಯನಿರ್ವಹಿಸಿದ ಹಿನ್ನಲೆ ಚಿಕ್ಕವಯಸ್ಸಿನಲ್ಲಿ ಪ್ರಿಯಾಂಕಾ ಚಿಕ್ಕೋಡಿಯಿಂದ ಕಣದಲ್ಲಿದ್ದಾರೆ. ಪ್ರಿಯಾಂಕಾ ಲಾಕ್ ಡೌನ್, ನೆರೆ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದು, ಗೋಕಾಕ ಮತ್ತು ಅರಭಾವಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸಾಕಷ್ಟು ಕೆಲಸ ಮಾಡಿದ್ದೇನೆ. ಇನ್ನೂ ಹೆಚ್ಚಿನ ಕೆಲಸ ಮಾಡಲು ಜಿಲ್ಲೆಯ ಎರಡು ಕಡೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಬಿಜೆಪಿಗೆ ಇಲ್ಲಿಯವರೆಗೆ ಒಂದೇ ಒಂದು ಡ್ಯಾಂ ಮತ್ತು ವಿಶ್ವವಿದ್ಯಾಲಯ ಕಟ್ಟಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಶಿಕ್ಷಣ ಸಂಸ್ಥೆಗಳು ಹೆಚ್ಚೆಚ್ಚು ಸ್ಫಾಪಿತಗೊಂಡಿವೆ. ಅವು ನರೇಂದ್ರ ಮೋದಿಯವರ ಕಾಲದಲ್ಲಿ ಬಂದಿದ್ದಲ್ಲ, ಬಿಜೆಪಿ ಮೋದಿಯೇ ಗ್ಯಾರಂಟಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಕಾಂಗ್ರೆಸ್ ಪಕ್ಷ ಕೊಟ್ಟ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಕಾಂಗ್ರೆಸ್ ಪಕ್ಷ 23ರ ವಿಧಾನಸಭಾ ಚುನಾವಣೆಯಲ್ಲಿ 135 ಅಭ್ಯರ್ಥಿಗಳು ಗೆಲ್ಲುವ ಮೂಲಕ ದೇಶದಲ್ಲಿ ಇತಿಹಾಸ ಸೃಷ್ಟಿಸಿದೆ. ಕೋವಿಡ್ ಸಂದರ್ಭದಲ್ಲಿ ಹೆಣದ ಮೇಲೆ ರಾಜಕೀಯ ಮಾಡಿದ ಬಿಜೆಪಿಯನ್ನು ಸೋಲಿಸಬೇಕಿದೆ. ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಯುವ ಅಭ್ಯರ್ಥಿಗಳು ಮಾದರಿಯಾಗಿ ಅಭಿವೃದ್ಧಿ ಕಾರ್ಯ ಮಾಡಲಿದ್ದಾರೆ. ಬಿಜೆಪಿಯ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಆಗಿಲ್ಲ. ಆದರೆ ನಾವು ನುಡಿದಂತೆ ನಡೆದು ಪಂಚ ಗ್ಯಾರಂಟಿಗಳನ್ನು ಅನುಷ್ಠಾನ ಗೊಳಿಸಿದ್ದೇವೆ ಎಂದು ಸೂಚಿಸಿದರು.