ಬೆಂಗಳೂರು: ಯುವ ಜನರೂ ಸೇರಿದಂತೆ ಪದವಿ, ಇಂಜನಿಯರಿಂಗ್, ಡಿಪ್ಲೊಮಾ ಹಾಗೂ ವೃತ್ತಿಪರ ಕೋರ್ಸ್‌ಗಳನ್ನು ಪೂರ್ಣಗೊಳಿಸಿರುವವರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಬೃಹತ್ ಯುವ ಸಮೃದ್ಧಿ ಸಮ್ಮೇಳನ ಇದೇ ತಿಂಗಳ 26ರಿಂದ ಎರಡು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಕೌಶಲ್ಯಾಭಿವೃದ್ದಿ ಹಾಗೂ ಜೀವನೋಪಾಯ ಇಲಾಖೆ ಸಹಭಾಗಿತ್ವದಲ್ಲಿ ನಡೆಯಲಿರುವ ಯುವ ಸಮೃದ್ಧಿ ಸಮ್ಮೇಳನದ ಉದ್ಯೋಗ ಮೇಳ ಕುರಿತು ಬುಧವಾರ ವಿಧಾನಸೌಧದ ಸಮ್ಮೇಳನದ ಸಭಾಂಗಣದಲ್ಲಿ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ಹಾಗೂ ಐಟಿ – ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ಇದೇ ತಿಂಗಳ 26 ಮತ್ತು 27ರಂದು ಬೆಂಗಳೂರಿನ ಅರಮನೆಯಲ್ಲಿ ಯುವ ಸಮೃದ್ಧಿ ಸಮ್ಮೇಳನ ಎಂಬ ಹೆಸರಿನಡಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಪದವಿ, ಎಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‍ಗಳನ್ನು ಮುಗಿಸಿರುವ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಒದಗಿಸಿ ಕೊಡುವ ಮೇಳ ಇದಾಗಿದೆ ಎಂದು ತಿಳಿಸಿದರು.