ಸಭೆಗೆ ಗೈರು | ಸಹಾಯಕ ಪಶುವೈದ್ಯಾಧಿಕಾರಿಗಳ ಮೇಲೆ ಶಿಸ್ತು ಕ್ರಮ
ಕೈನಕಟ್ಟಿ, ಪಕೀರ ಬೂದಿಹಾಳ, ಇನಾಮ ಹುಲ್ಲಿಕೇರಿ ಪಿಡಿಓ ಮೇಲೆ ಕ್ರಮಕ್ಕೆ ಸೂಚನೆ
ಬಾಗಲಕೋಟೆ
ಜಿಲ್ಲೆಯಲ್ಲಿ ಬರಗಾಲ ಪರಿಸ್ಥಿತಿ ಹಿನ್ನಲೆಯಲ್ಲಿ ಬರುವ 7 ತಿಂಗಳು ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಜನರಿಗೆ ನರೇಗಾದಡಿ ಕೂಲಿ ಕೆಲಸ ನೀಡಲು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡುವಂತೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೀಳಗಿ ಮತಕ್ಷೇತ್ರದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಕಲಾದಗಿಯ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಬರಗಾಲ ಪರಿಸ್ಥಿತಿಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಬರ ಪರಿಸ್ಥಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.
ಇಂತಹ ಪರಿಸ್ಥಿತಿ ಇರುವಾಗ ಅಧಿಕಾರಿಗಳು ಮಾನವೀಯ ದೃಷ್ಠಿಯಿಂದ ನಮ್ಮವರಿಗೆ ತೊಂದರೆ ಆಗುತ್ತಿದೆ ಎಂದು ಭಾವಿಸಬೇಕು. ತಾಲೂಕ ಮಟ್ಟದ ಅಧಿಕಾರಿಗಳು ರಜೆ ಮೇಲೆ ತೆರಳಬೇಕಾದಲ್ಲಿ ಸ್ಥಳೀಯ ಶಾಸಕರ ಅನುಮತಿ . ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಅನುಮತಿ ಪಡೆಯುವದು ಕಡ್ಡಾಯವೆಂದರು.
ಅಧಿಕಾರಿಗಳು ಮನೋಧರ್ಮ ಬದಲಾವಣೆಮಾಡಿಕೊಳ್ಳಬೇಕು. ನಮ್ಮ ಸರಕಾರ ಎಂಭ ಭಾವನೆ ಇಟ್ಟುಕೊಂಡು ಕೆಲಸಮಾಡಬೇಕು. ಬರ ನಿರ್ವಹಣೆಯಲ್ಲಿ ಲೋಪವಾದಲ್ಲಿ ಅಧಿಕಾರಿಗಳನ್ನೆ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ವರಿಕೆ ನೀಡಿದರು.
ಬರ ನಿರ್ವಹಣೆ ಸಭೆಗೆ ಗೈರು ಹಾಜದಾದ ಬಾದಾಮಿಯ ಸಹಾಯಕ ಪಶುವೈದ್ಯಾಧಿಕಾರಿ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಸಚಿವರು ಜಿಲ್ಲಾಧಿಕಾರಿ, ಜಿ.ಪಂ ಸಿಇಓ ಅವರಿಗೆ ಸೂಚಿಸಿದರು. ಕೈನಕಟ್ಟಿ, ಪಕೀರ ಬೂದಿಹಾಳ ಹಾಗೂ ಇನಾಮ ಹುಲ್ಲಿಕೇರಿ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುತ್ತಿಲ್ಲ ಇದರಿಂದ ಗ್ರಾಮದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಅವರ ಕರ್ತವ್ಯ ಲೋಪಕ್ಕೆ ಸೂಕ್ತ ಶಿಸ್ತಿನ ಕ್ರಮ ಜರುಗಿಸಲು ಬೀಳಗಿ ಶಾಸಕ ಜೆ.ಟಿ.ಪಾಟೀಲ ಅಧಿಕಾರಿಗಳಿಗೆ ತುಳಿಸಿದರು.
ಬೀಳಗಿ ಮತಕ್ಷೇತ್ರದಲ್ಲಿ ಬರುವ ಬೀಳಗಿ, ಬಾಗಲಕೋಟೆ ಹಾಗೂ ಬಾದಾಮಿ ವ್ಯಾಪ್ತಿಯ ಗ್ರಾಮಗಳಲ್ಲಿ ಬರ ನಿರ್ವಹಣೆಗೆ ಕೈಗೊಂಡಕ್ರಮಗಳ ಕುರಿತು ಮೂರು ತಾಲೂಕಿನ ತಹಶೀಲ್ದಾರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದುಕೊಂಡರು. ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಲು ತಿಳಿಸಿದರು.
ಸದರಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿಕೆ.ಎಂ, ಜಿ.ಪಂ ಸಿಇಓ ಶಶಿಧರ ಕುರೇರ, ಉಪ ವಿಭಾಗಾಧಿಕಾರಿಗಳಾದ ಶ್ಚೇತಾ ಬೀಡಿಕರ, ಸಂತೋಷ ಕಾಮಗೌಡ ಸೇರಿದಂತೆ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಳೆಹಾನಿ ವೀಕ್ಷಿಸಿದ ಸಚಿವರು
ಬೀಳಗಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬರ ಪರಿಸ್ಥಿತಿಯಿಂದ ಉಂಟಾದ ಪರಿಸ್ಥಿತಿ ಹಾಗೂ ಬೆಳೆ ಹಾನಿ ವೀಕ್ಷಿಸಿದರು.
ಸಿದ್ದಾಪೂರ ಗ್ರಮದಲ್ಲಿ ಗೋವಿನ ಜೋಳ, ನಾಗರಾಳದಲ್ಲಿ ಕಬ್ಬು, ಅನಗವಾಡಿಯಲ್ಲಿ ಗೋವಿನ ಜೋಳ, ತೊಗರಿ ಹಾಗೂ ಕಲಾದಗಿಯಲ್ಲಿ ಜೋಳ ಮತ್ತು ಸೂರ್ಯಕಾಂತಿ ಬೆಳೆ ಹಾನಿ ವೀಕ್ಷಿಸಿದರು.