ಬಾಗಲಕೋಟೆ:
ಸಕ್ಕರೆ ಕಾರ್ಖಾನೆಯಿಂದ ಕಬ್ಬು ಬೆಳೆಗಾರರಿಗೆ ಯಾವುದೇ ರೀತಿಯ ಮೋಸವಾಗದಂತೆ ಕ್ರಮವಹಿಸುವದರ ಜೊತೆಗೆ ರೈತರ ಹಿತ ಕಾಪಾಡಲು ಸರಕಾರ ಬದ್ದವಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ಮಂಗಳವಾರ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆ ಮಾಲಿಕರು, ರೈತರು ಮತ್ತು ರೈತ ಮುಖಂಡರ ಜೊತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೇಂದ್ರ ಸರಕಾರದಿಂದ ನಿಗದಿಯಾಗಿರುವ ಎಫ್.ಆರ್.ಪಿ ದರವು ಅತಿ ಕಡಿಮೆಯಾಗಿದ್ದು, ವೈಜ್ಞಾನಿಕವಾಗಿ ಮರು ಪರಿಷ್ಕರಣೆಗೆ ಸರಕಾರದಿಂದ ಈಗಾಗಲೇ ಕೋರಿ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಕಬ್ಬು ಸಾಗಾಣಿಕೆ ಮತ್ತು ಕಟಾವಿಗೆ ಸಂಬAಧಿಸಿದAತ ಈಗಾಗಲೇ ದರಗಳನು ಎರಡು ವರ್ಷಗಳ ಹಿಂದೆ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ. ಇದನ್ನು ಕಡ್ಡಾಯವಾಗಿ ಎಲ್ಲ ಸಕ್ಕರೆ ಕಾರ್ಖಾನೆಗಳ ಮಾಲಿಕರು ಪಾಲಿಸಂತೆ ಸೂಚನೆ ನೀಡಲಾಗಿದೆ. ತೂಕ ಮತ್ತು ಅಳತೆಯಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ನಿರ್ಧಾಕ್ಷಣ್ಯವಾಗಿ ಕ್ರಮಕೈಗೊಳ್ಳಲಾಗುತ್ತಿದೆ. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸರಕಾರ ಈಗಾಗಲೇ ಪ್ರತಿಯೊಂದು ಸಕ್ಕರೆ ಕಾರ್ಖಾನೆಗಳಲ್ಲಿ ಡಿಜಿಟಲೈಸ್ಡ್ ತೂಕದ ಯಂತ್ರಗಳನ್ನು ಸರಕಾರದ ವತಿಯಿಂದ ಅಳವಡಿಸಲು ತೀರ್ಮಾನಿಸಲಾಗಿದೆ ಎಂದರು.
ಹಿಂದಿನ ಸಾಲಿನಲ್ಲಿ ಎಫ್.ಆರ್.ಪಿ ದರಕ್ಕಿಂತ ಕಾರ್ಖಾನೆಗಳು ಘೊಷಿಸಿದ ಬಾಕಿ ಹಣವನ್ನು ನೀಡುವ ಪರಿಶೀಲಿಸಿ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರ ನಡುವೆ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಕ್ಕರೆ ಕಾರ್ಖಾನೆಗಳ ಉಪ ಉತ್ಪನ್ನಗಳಿಂದ ಬರುವ ಲಾಭದಲ್ಲಿ ರೈತರಿಗೆ ಲಾಭ ದೊರೆಯುವಂತೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಅಲ್ಲದೇ ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್‌ನಡಿ ಪರಿಹಾರಕ್ಕಾಗಿ ಕಬ್ಬು ಬೆಳೆ ಸೇರಿಸಲು ತೀರ್ಮಾನಿಸಲಾಗಿದೆ ಎಂದರು.
ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ಯುಕ್ತರಾದ ರವಿಕುಮಾರ ಎಂ.ಆರ್ ಅವರು ರೈತರ ಅಳಲನ್ನು ಮಾತನಾಡಿ ತೂಕ ಮತ್ತು ಸಾಗಾಣಿಕೆ ವೆಚ್ಚದಲ್ಲಿ ಆಗುವ ಮೋಸವನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಕ್ರಮವಹಿಸಿದೆ. ಕಬ್ಬು ನಿರಿಸಿದ ೧೪ ದಿನಗಳ ಒಳಗಾಗಿ ಕಾರ್ಖಾನೆಗಳು ಸಂಪೂರ್ಣ ಬಿಲ್ ಪಾವತಿಸಬೇಕು. ಇಲ್ಲವಾದಲ್ಲಿ ಬಡ್ಡಿ ಸಮೇತ ಬಿಲ್ ಪಾವತಿಸಬೇಕು. ಸಾಗಾಣಿಕೆ ವೆಚ್ಚ ಕಡಿತಗೊಳಿಸಿ ಬಿಲ್ ಪಾವತಿಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರಕಾರ ಎಫ್.ಆರ್.ಪಿ ದರ ಪರಿಷ್ಕರಣೆಗೆ ಕೇಂದ್ರಕ್ಕೆ ರಾಜ್ಯ ಸರಕಾರದಿಂದ ಪತ್ರ ಬರೆಯಲಾಗಿದೆ. ರೈತರಿಗೆ ತೂಕ, ಕಟಾವು ಹಾಗೂ ಸಾಗಾಣಿಕೆ ವೆಚ್ಚದಲ್ಲಿ ಯಾವುದೇ ರೀತಿಯ ಮೋಸವಾಗದಂತೆ ಕ್ರಮವಹಿಸಲಾಗುತ್ತಿದೆ. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾನೂನು ತರಲು ಸರಕಾರ ತೀರ್ಮಾನಿಸಿದೆ ಎಂದು ತಿಳಿಸಿದರು. ಕಬ್ಬು ಬೆಳೆಗಾರರು ಕಟಾವು, ಸಾಗಾಣಿಕೆ ಹಾಗೂ ತೂಕದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಸಚಿವರಲ್ಲಿ ತೋಡಿಕೊಂಡರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿ.ಪಂ ಸಿಇಓ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನಬಸಪ್ಪ ಕೊಡ್ಲಿ, ಉಪವಿಭಾಗಾಧಿಕಾರಿಗಳಾದ ಶ್ವೇತಾ ಬೀಡಿಕರ, ಸಂತೋಷ ಕಾಮಗೌಡ, ಆಹಾರ ಇಲಾಖೆಯ ಮುಖ್ಯ ಲೆಕ್ಕಾಧಿಕಾರಿ ಚೌದರಿ ಸೇರಿದಂತೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲಿಕರು ಉಪಸ್ಥಿತರಿದ್ದರು.