ಬಾಗಲಕೋಟೆ
ಶಾಲಾ ವಾಹನ ಅಪಘಾತಕ್ಕೀಡಾಗಿ ಕವಟಗಿ ಗ್ರಾಮದ ೪ ಜನ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮೃತರ ಕುಟುಂಬಸ್ಥರ ಮನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಸೋಮವಾರ ಭೇಟಿ ನೀಡಿ ಸಾಂತ್ವನ ಹೇಳಿ, ದೌರ್ಯ ತುಂಬುವ ಕೆಲಸ ಮಾಡಿದರು.
ಜಮಖಂಡಿ ತಾಲೂಕಿನ ಆಲಗೂರ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತ ಸಂಭವಿಸಿ ೪ ಜನ ವಿದ್ಯಾರ್ಥಿಗಳು ಸಾವನ್ನಪ್ಪಿರುವುದು ಮನಸ್ಸಿಗೆ ತೀವ್ರ ಆಘಾತ ತಂದಿದೆ.
ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಆತ್ಮಕ್ಕೆ ಭಗವಂತ ಶಾಂತಿ ನೀಡಲೇಂದು ಪ್ರಾರ್ಥಿಸುವುದಾಗಿ ತಿಳಿಸಿದ ಅವರು ಜಮಖಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಸಹ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ೨ ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ತಲಾ ೫೦ ಸಾವಿರ ರೂ.ಗಳ ಪರಿಹಾರ ನೀಡಲಾಗುವುದೆಂದು ತಿಳಿಸಿದರು. ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಸೇರಿದಂತೆ ಇತರೇ ಅಧಿಕಾರಿಗಳು ಇದ್ದರು.
ಫೆ.೧೧ ರಿಂದ ೨೩ ವರೆಗೆ ಸಂವಿಧಾನ ಜಾಗೃತಿ ಜಾಥಾ
ಬಾಗಲಕೋಟೆ: ಹುನಗುಂದ ಮತ್ತು ಇಲಕಲ್ಲ ತಾಲೂಕುಗಳಲ್ಲಿ ಫೆಬ್ರವರಿ ೧೧ ರಿಂದ ೨೩ ವರೆಗೆ ಹಮ್ಮಿಕೊಳ್ಳಲಾಗುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು, ಸ್ವ-ಸಹಾಯ ಸಂಘಗಳ ಸದಸ್ಯರು, ಶಾಲಾ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿಗಳು ಮತ್ತು ದಲಿತ ಸಮಾಜದ ಮುಖಂಡರು ಸ್ವಯಂ ಪ್ರೇರಿತವಾಗಿ ಆಯಾ ಗ್ರಾಮ ಪಂಚಾಯತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂಸಂ.೦೮೩೫೧-೨೬೦೫೮೩ಗೆ ಸಂಪರ್ಕಿಸುವAತೆ ಹುನಗುಂದ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಅಗ್ನಿವೀರ ಆಯ್ಕೆಗೆ ಅರ್ಜಿ*
ಬಾಗಲಕೋಟೆ: ಭಾರತೀಯ ವಾಯು ಪಡೆಯ ಅಗ್ನಿಫಥ ಯೋಜನೆಯಡಿ ಅಗ್ನಿವೀರ ವಾಯು ಆಯ್ಕೆ ಪರೀಕ್ಷೆಗಾಗಿ ಅವಿವಾಹಿತ ಪುರುಷರು ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪಿಯುಸಿ, ತತ್ಸಮಾನ ಪರೀಕ್ಷೆಯಲ್ಲಿ ಶೇ.೫೦ ರಷ್ಟು ಅಂಕಗಳೊಂದಿಗೆ ಹಾಗೂ ಡಿಪ್ಲೋಮಾದಲ್ಲಿ ಕನಿಷ್ಟ ಶೇ.೫೦ ರಷ್ಟು ಅಂಕಗಳೊಂದಿಗೆ ಇಂಗ್ಲೀಷ ವಿಷಯದಲ್ಲಿ ಕನಿಷ್ಟ ಶೇ.೫೦ ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಅಭ್ಯರ್ಥಿಗಳು ೨೦೦೪ರ ಜನೇವರಿ ೨ ರಿಂದ ೨೦೦೭ರ ಜುಲೈ ೭ರ ನಡುವೆ ಜನಿಸಿರಬೇಕು. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ ೬ ರೊಳಗಾಗಿ ಅರ್ಜಿಯನ್ನು ಸಲ್ಲಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಪ್ರಕರಣೆಯಲ್ಲಿ ತಿಳಿಸಿದ್ದಾರೆ.